ಈಗಲೂ ನಿಂತಿಲ್ಲ ಬಹಿಷ್ಕಾರ ಪದ್ಧತಿ; ಗೋಳೂರು ಗ್ರಾಮದಲ್ಲಿ ಗ್ರಾಪಂ ಸದಸ್ಯೆಗೆ ಬಹಿಷ್ಕಾರ
ನಂಜನಗೂಡು, ಅಕ್ಟೋಬರ್ 19: ಸಾಮಾಜಿಕ ಬಹಿಷ್ಕಾರಕ್ಕೆ ಬೇಸತ್ತು ಮನನೊಂದ ಕುಟುಂಬವೊಂದು ಗ್ರಾಮ ತೊರೆಯಲು ಮುಂದಾಗಿರುವ ಘಟನೆ ತಾಲೂಕಿನ ಗೋಳೂರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮ ಪಂಚಾಯಿತಿ ಸದಸ್ಯೆಯಾಗಿ ಗ್ರಾಮವನ್ನು ಪ್ರತಿನಿಧಿಸಬೇಕಾಗಿದ್ದ ಗ್ರಾಮ ಪಂಚಾಯಿತಿ ಸದಸ್ಯೆ, ಗೋಳೂರು ಗ್ರಾಮದ ನಿವಾಸಿ ದೊಡ್ಡಮ್ಮ ಎಂಬುವರೇ ಸಾಮಾಜಿಕ ಬಹಿಷ್ಕಾರಕ್ಕೊಳಪಟ್ಟವರಾಗಿದ್ದಾರೆ. ಇವರು ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯರಾಗಿದ್ದು, ಪಂಚಾಯಿತಿಯಲ್ಲಿ ಅಭಿವೃದ್ಧಿ ಬಗ್ಗೆ ನಡೆದ ಮಾತಿನ ವಿಚಾರಗಳನ್ನೇ ಗುರಿಯಾಗಿಸಿಕೊಂಡು ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ.
ಗ್ರಾಮದಲ್ಲಿ ನಡೆಯುವ ಗ್ರಾಮ ದೇವತೆ ಹಬ್ಬಕ್ಕೆ, ಇತರೆ ಯಾವುದೇ ಹಬ್ಬ ಹರಿದಿನಗಳಿಗೆ ಅವರಿಂದ ವಂತಿಗೆ ಹಣ ಪಡೆದುಕೊಳ್ಳಬಾರದು, ಅವರನ್ನು ಯಾರೂ ತಮ್ಮ ಮನೆಗಳಿಗೆ ಸೇರಿಸಿಕೊಳ್ಳಬಾರದು, ಬೆಂಕಿ ಬಿಸಿ ನೀರನ್ನು ಕೊಡಬಾರದೆಂದು ಕಟ್ಟಾಜ್ಞೆ ವಿಧಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಮನನೊಂದ ದೊಡ್ಡಮ್ಮ ಒಬ್ಬ ಜನಪ್ರತಿನಿಧಿಯಾದ ತಮಗೆ ಬಹಿಷ್ಕಾರ ಹಾಕಿ ತಮನಗೆ ಮತ್ತು ತಮ್ಮ ಕುಟುಂಬಕ್ಕೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಿರುವುದರಿಂದ ತಾವು ಗ್ರಾಮ ತೊರೆಯಲು ನಿರ್ಧರಿಸಿದ್ದು ಈ ಸಂಬಂಧ ನ್ಯಾಯ ದೊರಕಿಸಿಕೊಡುವಂತೆ ತಾಲೂಕು ದಂಡಾಧಿಕಾರಿಯವರಿಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿರುವ ನಂಜನಗೂಡಿನ ತಹಶೀಲ್ದಾರ್ ಮಹೇಶ್ ಕುಮಾರ್ ಅವರು ಗ್ರಾಮದ ಯಜಮಾನರ ವಿರುದ್ಧ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಿ ಸತ್ಯಾಸತ್ಯತೆ ಪರಿಶೀಲಿಸಿ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.












Click it and Unblock the Notifications