ಎರಡನೇ ಪಟ್ಟಿಯಲ್ಲೂ ಘೋಷಣೆಯಾಗದ ಬಿಜೆಪಿ ಅಭ್ಯರ್ಥಿ: ಕಗ್ಗಂಟಾಗಿ ಉಳಿದ ಕೆ.ಆರ್.ಕ್ಷೇತ್ರ
ಮೈಸೂರು, ಏಪ್ರಿಲ್ 13: ಬಿಜೆಪಿ ಬುಧವಾರ ರಾತ್ರಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ತನ್ನ ಎರಡನೇ ಪಟ್ಟಿ ಪ್ರಕಟ ಮಾಡಿದೆ. ಮೈಸೂರು ಜಿಲ್ಲೆಯಲ್ಲಿ ಬಾಕಿ ಇದ್ದ ಎಚ್.ಡಿ.ಕೋಟೆ (ಎಸ್ ಟಿ ಮೀಸಲು) ಕ್ಷೇತ್ರಕ್ಕೆ ಕೃಷ್ಣ ನಾಯಕ್ ಹೆಸರು ಘೋಷಣೆ ಆಗಿದೆ. ಆದರೆ, ಕೆ.ಆರ್.ಕ್ಷೇತ್ರ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ.
ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯಲ್ಲಿ ವಿಧಾನ ಸಭೆ ಚುನಾವಣೆ ಕಾವು ಜೋರಾಗಿಯೇ ಇದೆ. ರಾಜ್ಯದ ಅತಿ ದೊಡ್ಡ ಹಾಗೂ ಎರಡನೇ ಅಧಿಕಾರ ಶಕ್ತಿ ಕೇಂದ್ರವಾಗಿರುವ ಹಳೆಯ ಮೈಸೂರು ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ, ಮತ್ತೊಮ್ಮೆ ಸದ್ದು ಮಾಡಿದೆ. ಜಿಲ್ಲೆಯ 11 ಕ್ಷೇತ್ರಗಳಲ್ಲಿ ಬಿಜೆಪಿ 10 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಆದರೆ, ಕೆ.ಆರ್.ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸದೆ ಕುತೂಹಲ ಮೂಡಿಸಿದೆ. ಇದು ಜನರನ್ನು ಗೊಂದಲಕ್ಕೆ ಕಾರಣವಾಗಿದೆ.

ರಾಮದಾಸ್‌ಗೆ ಸಿಗುವುದೆ ಟಿಕೆಟ್?
ಬಿಜೆಪಿಯಿಂದ ಮೂರು ಬಾರಿ ಶಾಸಕರಾಗಿರುವ ರಾಮದಾಸ್ ಅವರಿಗೆ ಈ ಬಾರಿಯೂ ಟಿಕೆಟ್ ಸಿಗುತ್ತದೆಯೇ ಎಂಬ ಪ್ರಶ್ನೆ ಮತದಾರರಲ್ಲಿ ಪ್ರಶ್ನೆ ಮೂಡಿಸಿದೆ. ಅವರಿಗೆ ಟಿಕೆಟ್ ತಪ್ಪಿಸಬೇಕು ಎನ್ನುವ ಒಂದು ಗುಂಪು ಪ್ರಬಲ ಪೈಪೋಟಿ ನಡೆಸಿದೆ. ಈಗಾಗಲೇ ಪ್ರಬಲ ವಿಪ್ರ ಸಮುದಾಯ ರಾಮದಾಸ್ ವಿರುದ್ಧ ತಿರುಗಿ ಬಿದ್ದಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರಿಗೂ ಸಮುದಾಯದ ಮುಖಂಡರು ದೂರು ನೀಡಿದ್ದಾರೆ. 'ರಾಮದಾಸ್ ಅವರಿಗೆ ಸಮುದಾಯದ ಬಗ್ಗೆ ಕಾಳಜಿ ಇಲ್ಲ. ಯಾವುದೆ ಅಭಿವೃದ್ಧಿ ಕೆಲಸ ಮಾಡಿಲ್ಲ. ಹಾಗಾಗಿ ಈ ಬಾರಿ ಟಿಕೆಟ್ ನೀಡಬೇಡಿ' ಎಂಬ ಮನವಿ ದೂರ ದೆಹಲಿ ವರಿಷ್ಠರವರೆಗೂ ಹೋಗಿದೆ. ಹಾಗಾಗಿ ಕೆ.ಆರ್. ಕ್ಷೇತ್ರದ ಅಭ್ಯರ್ಥಿ ಘೋಷಣೆ ಕಗ್ಗಂಟಾಗಿಯೇ ಉಳಿದಿದೆ.
ಶ್ರೀವತ್ಸಗೆ ದೊರೆಯುವುದೆ ಟಿಕೆಟ್?
ಇತ್ತ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಟಿಕೆಟ್ ಪಡೆಯಲು ಹರಸಾಹಸ ಮಾಡುತ್ತಿದ್ದಾರೆ ಎಂಬ ಮಾತು ಪ್ರಬಲವಾಗಿ ಹೇಳಿ ಬರುತ್ತಿದೆ. ಈಗಾಗಲೇ ದೆಹಲಿಯಲ್ಲಿ ಬೀಡುಬಿಟ್ಟಿರುವ ಶ್ರೀವತ್ಸ ಟಿಕೆಟ್ ಪಡೆಯಲು ಅಂತಿಮ ಕಸರತ್ತು ಮಾಡುತ್ತಿದ್ದಾರೆ. ಇವರಿಗೆ ವಿಪ್ರ ಸಮುದಾಯದ ಬೆಂಬಲ ಕೂಡ ಇದೆ. ಆರ್‌ಎಸ್‌ಎಸ್ ಮುಖಂಡ ಬಿ.ಎಲ್. ಸಂತೋಷ್ ಆಪ್ತರಾಗಿದ್ದಾರೆ. ಹೀಗಾಗಿ ಶ್ರೀವತ್ಸ ಅವರಿಗೆ ಟಿಕೆಟ್ ಸಿಗುವುದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.
ಎಚ್.ವಿ.ರಾಜೀವ್ ನಡೆ ಏನು?
ಕ್ಷೇತ್ರದ ಮತ್ತೊಬ್ಬ ಪ್ರಬಲ ಟಿಕೆಟ್ ಆಕಾಂಕ್ಷಿ ಎಂದರೆ ಅದು ಎಚ್.ವಿ.ರಾಜೀವ್. ಈ ಹಿಂದೆ ರಾಜೀವ್ ಬಿಜೆಪಿ ಸರಕಾರದ ಅವಧಿಯಲ್ಲಿ ಮುಡಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಆದರೆ, ಒಂದೂವರೆ ವರ್ಷ ಅಷ್ಟೇ ಅವಕಾಶ ನೀಡಲಾಗಿತ್ತು. ಈ ಬಗ್ಗೆಯೂ ರಾಜೀವ್ ಅವರಿಗೆ ಅಸಮಾಧಾನ ಇದೆ. ಈ ಹಿಂದೆ ಯಡಿಯೂರಪ್ಪ ಅವರು ಕೆಜೆಪಿ ಪಕ್ಷ ಕಟ್ಟಿದಾಗ ಎಚ್.ವಿ.ರಾಜೀವ್ ಕೆಜೆಪಿ ಪಕ್ಷದಿಂದ ಸ್ಪರ್ಧಿಸಿದ್ದರು.
ರಾಮದಾಸ್ ಹಾಗೂ ರಾಜೀವ್ ಸ್ಪರ್ಧೆಯಿಂದ ವಿಪ್ರ ಸಮುದಾಯದ ವೋಟು ಇಬ್ಭಾಗ ಆದ ಕಾರಣ ಕಾಂಗ್ರೆಸ್ ಅಭ್ಯರ್ಥಿ ಎಂ.ಕೆ.ಸೋಮಶೇಖರ್ ಸುಲಭವಾಗಿ ಗೆಲುವು ಸಾಧಿಸಿದ್ದರು. ಒಂದು ವೇಳೆ ರಾಜೀವ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದರೆ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ಇನ್ನೂ ಅಂತಿಮವಾಗದ ಕಾಂಗ್ರೆಸ್ ಅಭ್ಯರ್ಥಿ
ಇತ್ತ ಕಾಂಗ್ರೆಸ್ ಕೂಡ ಕೆ.ಆರ್.ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಕೆ.ಆರ್ ಕ್ಷೇತ್ರದಲ್ಲಿ ವಿಪ್ರ, ಲಿಂಗಾಯತ ಹಾಗೂ ಕುರುಬ ಸಮುದಾಯದ ವೋಟುಗಳೇ ನಿರ್ಣಾಯಕ. ಹಾಗಾಗಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡಲು ಅಳೆದು ತೂಗಿ ನೋಡುತ್ತಿವೆ. ಸಿದ್ದರಾಮಯ್ಯ ಅವರ ಆಪ್ತ ಶಾಸಕರಾಗಿರುವ ಎಂ. ಕೆ ಸೋಮಶೇಖರ್ ಕಳೆದ ಚುನಾವಣೆಯಲ್ಲಿ ಇಲ್ಲಿ ಸೋಲು ಕಂಡಿದ್ದರು. ಈ ಬಾರಿ ಪ್ರದೀಪ್ ಕುಮಾರ್ ಹಾಗೂ ನವೀನ್ ಕುಮಾರ್ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್ ನಿಂದ ನಗರ ಪಾಲಿಕೆ ಸದಸ್ಯ ಕೆ. ವಿ ಮಲ್ಲೇಶ್ ಅಭ್ಯರ್ಥಿ ಎಂದು ಈಗಾಗಲೇ ಘೋಷಿಸಲಾಗಿದೆ.












Click it and Unblock the Notifications