Lok Sabha Election: ಪ್ರತಾಪ್ ಸಿಂಹ, ಯದುವೀರ್ ಬಿಟ್ಟು 3ನೇ ಅಭ್ಯರ್ಥಿ ಬಗ್ಗೆ ಬಿಜೆಪಿ ಸರ್ವೇ!
ಮೈಸೂರು, ಮಾರ್ಚ್ 11: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ರಾಜ್ಯದಲ್ಲಿ ಅಚ್ಚರಿಯ ಬೆಳವಣಿಗಳು ನಡೆಯುತ್ತಿದೆ. ಈಗಾಗಲೇ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಇಂದು ಎರಡನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಪಕ್ಷದ ಮುಖಂಡರು ಸೇರಿದಂತೆ ಸಾಮಾನ್ಯ ಕಾರ್ಯಕರ್ತರಿಗೂ ಬಿಜೆಪಿ ಟಿಕೆಟ್ ನೀಡಲು ಸಿದ್ಧತೆ ನಡೆಸಿದ್ದು, ಇದರಿಂದ ಕೆಲವು ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ.
ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಗೂ ಮುನ್ನ ಅಚ್ಚರಿಯ ಬೆಳವಣಿಗೆ ಏನು ಎಂದರೆ, ಅನೇಕ ಜನಪರ ಕೆಲಸಗಳನ್ನು ಮಾಡಿ ಜನಮನ್ನಣೆ ಗಳಿಸಿರುವ ಮೈಸೂರು ಸಂಸದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬಂದಿವೆ. ಬದಲಿಗೆ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್‌ಗೆ ಬಿಜೆಪಿ ಮಣೆ ಹಾಕಲಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಜೋರಾಗಿದೆ.

ಮೈಸೂರು-ಕೊಡಗು ಲೋಕಸಭಾ ಟಿಕೆಟ್ ಪ್ರತಾಪ್ ಸಿಂಹ ಅಥವಾ ಯದುವೀರ್ ಒಡೆಯರ್ ಇಬ್ಬರಲ್ಲಿ ಯಾರಾ ಪಾಲಾಗುತ್ತದೆ ಎನ್ನುವ ಲೆಕ್ಕಚಾರದ ಮಧ್ಯೆ ಬಿಜೆಪಿ ಟಿಕೆಟ್ ಗೊಂದಲದಲ್ಲಿ ಮತ್ತೊಬ್ಬರ ಹೆಸರು ಪ್ರವೇಶವಾಗಿದೆ ಎನ್ನುವ ಇಂಟ್ರಸ್ಟಿಂಗ್ ವಿಚಾರ ಹೊರಬಿದ್ದಿದೆ.
ಮೈಸೂರು ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಬಿಜೆಪಿ ಹೈಕಮಾಂಡ್ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದು, ಪ್ರತಾಪ್ ಸಿಂಹ, ಯದುವೀರ್ ಒಡೆಯರ್ ಹೊರತು ಪಡಿಸಿ, ಮೂರು ದಿನಗಳ ಹಿಂದೆ ಮತ್ತೊಬ್ಬ ಅಭ್ಯರ್ಥಿ ಬಗ್ಗೆ ಸರ್ವೇ ಮಾಡಿಸಿ ಅಮಿತ್ ಶಾ ವರದಿ ತರಿಸಿಕೊಂಡಿದ್ದಾರೆ ಎನ್ನಲಾಗಿದೆ. ಒಕ್ಕಲಿಗ ಸಮುದಾಯದ ಹಾಗೂ ಆರ್‌ಎಸ್‌ಎಸ್‌ನ ನಿಷ್ಠ ಅಭ್ಯರ್ಥಿ ಬಗ್ಗೆ ಒಂದೇ ದಿನದಲ್ಲಿ ಸರ್ವೇ ನಡೆಸಿ ವರದಿ ಕಲೆ ಹಾಕಿರುವ ಬಿಜೆಪಿ ಹೈಕಮಾಂಡ್ ಮೂರು ಹೆಸರುಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮುಂದಿಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಈ ಹಿಂದೆ ಬಿಜೆಪಿ ಹೈಕಮಾಂಡ್ ಪ್ರತಾಪ್ ಸಿಂಹ ಅವರ ಜೊತೆಗೆ ಮಡಿಕೇರಿಯ ಮಾಜಿ ಶಾಸಕ ಅಪ್ಪಚ್ಚು ರಂಜನ್, ಮೈಸೂರಿನ ಹಿರಿಯ ಬಿಜೆಪಿ ನಾಯಕ ಸಿ.ಎಚ್. ವಿಜಯ ಶಂಕರ್ ಅವರ ಬಗ್ಗೆಯೂ ಸರ್ವೆ ನಡೆಸಿದ್ದು, ಅವರಲ್ಲಿ ಪ್ರತಾಪ್ ಸಿಂಹ ಅವರ ಕಡೆಗೆ ಜನರು ಹೆಚ್ಚಿನ ಒಲವು ತೋರಿದ್ದಾರೆ ಎನ್ನಲಾಗಿದೆ.

ಪ್ರತಾಪ್ ಸಿಂಹ ಮೈಸೂರು ಕ್ಷೇತ್ರದ ಜನ ಮುನ್ನಣೆ ಗಳಿಸಿರುವ ನಾಯಕನಾಗಿದ್ದು, ಸಂಸದರಾಗಿ ತಮ್ಮ 10 ವರ್ಷಗಳ ಅವಧಿಯಲ್ಲಿ ಪ್ರತಾಪ್ ಸಿಂಹ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎನ್ನುವುದು ಕ್ಷೇತ್ರದ ಬಹುತೇಕರ ಅಭಿಪ್ರಾಯವಾಗಿದೆ. ಹೀಗಾಗಿ ಅವರಿಗೆ ಮತ್ತೆ ಬಿಜೆಪಿ ಟಿಕೆಟ್ ನೀಡಬೇಕು ಎನ್ನುವ ಆಗ್ರಹ ಜೋರಾಗಿಯೇ ಕೇಳಿಬರುತ್ತಿದೆ.












Click it and Unblock the Notifications