ಬಿಟ್ ಕಾಯಿನ್; ಕಾಂಗ್ರೆಸ್ಸಿಗರಿಗೆ ಭಯ ಶುರುವಾಗಿದೆ
ಮೈಸೂರು, ನವೆಂಬರ್ 11; " ಬಿಟ್ ವಿಚಾರದಲ್ಲಿ ಕಾಂಗ್ರೆಸ್ಸಿಗರಿಗೆ ಭಯ ಶುರುವಾಗಿದ್ದು, ಪ್ರಕರಣದ ಗಂಭೀರ ತನಿಖೆ ಮಾಡಿದರೆ ಕಾಂಗ್ರೆಸ್‌ನವರೇ ಸಿಕ್ಕಿ ಹಾಕಿಕೊಳ್ಳುತ್ತಾರೆ" ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಗುರುವಾರ ಮಾತನಾಡಿದ ಸಂಸದರು, ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ಸಿಗರ ವಿರುದ್ಧ ವಾಗ್ದಾಳಿಯನ್ನು ನಡೆಸಿದರು.
"ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಧ್ಯಮಗಳ ಮೂಲಕ ನಿರೀಕ್ಷಣ ಜಾಮೀನು ಹಾಕುತ್ತಿದೆ. ಈ ಪ್ರಕರಣದಲ್ಲಿ ಗಂಭೀರವಾಗಿ ತನಿಖೆ ಮಾಡಿದರೆ, ಕಾಂಗ್ರೆಸ್‌ನವರೇ ಇದರಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಈಗಾಗಲೇ ಮೊದಲ ಚಾರ್ಜ್ ಶೀಟ್‌ನಲ್ಲಿ ಕಾಂಗ್ರೆಸ್ ಮುಖಂಡರ ಮಕ್ಕಳ ಹೆಸರೇ ಉಲ್ಲೇಖ ಆಗಿದೆ. ಹೀಗಾಗಿ ಕಾಂಗ್ರೆಸ್‌ನವರಿಗೆ ಭಯ ಬಂದೆ ನಿರೀಕ್ಷಣ ಜಾಮೀನು ಹಾಕುತ್ತಿದ್ದಾರೆ" ಎಂದು ದೂರಿದರು.
ಬಿಟ್ ಕಾಯಿನ್ ಹಗರಣ; ಕಾಂಗ್ರೆಸ್ ಮೇಲೆ ಮುಗಿಬಿದ್ದ ಬಿಎಸ್ವೈ ಪುತ್ರರು
"ರಫೇಲ್ ವಿಚಾರದಲ್ಲೂ ಕಾಂಗ್ರೆಸ್‌ನ ಅವ್ವ, ಮಗ ಇದೇ ರೀತಿ ಮಾಡಿದರು. ತಾವು ಡೀಲ್ ಮಾಡಿಕೊಂಡು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದರು. ಈಗ ಅವರ ಡೀಲ್ ಬಯಲಾಗಿದೆ. ರಾಜ್ಯದಲ್ಲೂ ಅದೇ ತಂತ್ರವನ್ನು ಕಾಂಗ್ರೆಸ್ ಪ್ರಯೋಗಿಸುತ್ತಿದೆ. ಈ ಪ್ರಕರಣವು ಕಾಂಗ್ರೆಸ್ ಕೊರಳಿಗೆ ಸುತ್ತಿಕೊಳ್ಳುತ್ತಿದೆ. ಇದರಿಂದ ಕಾಂಗ್ರೆಸ್ ಬಿಜೆಪಿ ಮೇಲೆ ಮೊದಲೇ ಆರೋಪ ಮಾಡುತ್ತಿದೆ" ಎಂದು ಕಿಡಿಕಾರಿದರು.
ಬಿಟ್ ಕಾಯಿನ್ ಅಕ್ರಮದ ಬಗ್ಗೆ ಹ್ಯಾಕರ್ ಶ್ರೀಕೃಷ್ಣ ಮೊದಲ ಭಾರಿ ಕೊಟ್ಟ ಸ್ಟೇಟ್ಮೆಂಟ್!
"ಸಿದ್ದರಾಮಯ್ಯ ಅವರು ಮಹಾನ್ ಆರ್ಥಿಕ ತಜ್ಞರಾಗಿದ್ದು, ಬಿಟ್ ಕಾಯಿನ್ ಎಂದರೇನು? ಅದರ ವ್ಯವಹಾರ ಹೇಗೆ ಆಗಲಿದೆ ಎಂದು ಅವರೇ ನಮ್ಮಂತವರಿಗೆ ವಿವರಿಸಲಿ. ಆ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಮಗಿದೆ. ನನಗೆ ಆ ಬಗ್ಗೆ ಮಾಹಿತಿ ಇಲ್ಲ, ಹಾಗಾಗಿ ಕೇಳುತ್ತಿದ್ದೇನೆ. ಬೊಮ್ಮಾಯಿ ಅವರ ಯಶಸ್ವಿ ಆಡಳಿತ ಸಹಿಸದೆ ಹೀಗೆ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ" ಎಂದು ಪ್ರತಾಪ್ ಸಿಂಹ ಆರೋಪ ಮಾಡಿದರು.
"ಬೊಮ್ಮಾಯಿ ಅವರು ಒನಕೆ ಓಬ್ಬವ ಜಯಂತಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರೇ ನೀವು ಮಾಡಿದ್ದೇನು?. ಓಬವ್ವನಂತ ವೀರ ವನಿತಾ ಮಹಿಳೆಯನ್ನು ಮೋಸದಿಂದ ಕೊಂದ ಹೈದರಾಲಿಯ ಮಗನ ಜಯಂತಿಯನ್ನ ನೀವು ಮಾಡಿದಿರಿ. ಮೈಸೂರು ಅರಸರಿಗೆ ಮೋಸ ಮಾಡಿದ ಟಿಪ್ಪುವಿನ ಜಯಂತಿ ನೀವು ಮಾಡಿದಿರಿ. ಮದಕರಿ ನಾಯಕನಿಗೆ ವಿಷ ಹಾಕಿ ಕೊಂದ ಟಿಪ್ಪು ಜಯಂತಿ ಮಾಡಿದ್ದು ನಿಮ್ಮ ಸಾಧನೆ. ನಿಮ್ಮಿಂದ ಬಸವರಾಜ ಬೊಮ್ಮಾಯಿ ಅಭಿವೃದ್ಧಿ ಪಾಠ ಕಲಿಯಬೇಕಾಗಿಲ್ಲ" ಎಂದು ಟಾಂಗ್ ಕೊಟ್ಟರು.
ಇನ್ನೂ ಬಿಟ್ ಕಾಯಿನ್ ವಿಚಾರದಲ್ಲಿ ಪ್ರಿಯಾಂಕ ಖರ್ಗೆ ಟ್ವಿಟ್ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, "ಸದಾಶಿವನಗರದಲ್ಲಿ 4 ಭವ್ಯ ಬಂಗಲೇ, ಒಂದೇ ನಂಬರ್‌ನ ಕಾರು. ನಾನು ನಿರ್ಗತಿಕ, ಶೋಷಣೆ ಒಳಗಾದವರು ಎಂದು ಹೇಳಿಕೊಳ್ಳುವವರಿಗೆ ಹೆಚ್ಚಿನ ಮನ್ನಣೆ ನೀಡುವ ಅಗತ್ಯ ಇಲ್ಲ. ಪ್ರಿಯಾಂಕ ಖರ್ಗೆಗೆ ಮೆಚ್ಯುರಿಟಿ ಇದೆಯೋ, ಇಲ್ಲವೋ ಎಂಬುದು ನೀವೆ ತೀರ್ಮಾನ ಮಾಡಿಕೊಳ್ಳಿ ನಾನು ಹೇಳುವುದಿಲ್ಲ" ಎಂದರು.
ಜಿಟಿಡಿ, ಸಿದ್ದರಾಮಯ್ಯ; ಇದೇ ವೇಳೆ ಜಿಟಿಡಿ ಹಾಗೂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಬಗ್ಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, "ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಮ್ಮನ್ನೆ ಸೋಲಿಸಿದವರನ್ನು. ನೀವೆ ಮನಸಾರೆ ಹಾಡಿ ಹೊಗಳುವ ಪರಿಸ್ಥಿತಿ ಬಂದಿದೆ. ಬೊಮ್ಮಾಯಿ ಅವರು ನೂರು ದಿನಗಳಲ್ಲಿ ಜನರ ಮನೆ ಮನ ತಲುಪಿದ್ದಾರೆ. ಉಪ ಚುನಾವಣೆಯಲ್ಲಿನ ಒಂದು ಸೋಲಿಗೆ ಬೇರೆ ಬೇರೆ ಕಾರಣ ಇರುತ್ತವೆ. ಅದು ರಾಜಕೀಯದ ಏಟು, ಒಳ ಏಟು, ತಂತ್ರ ಎಲ್ಲವು ಇರುತ್ತೆ" ಎಂದು ತಿಳಿಸಿದರು.
"ನಂಜನಗೂಡು, ಗುಂಡ್ಲುಪೇಟೆಯಲ್ಲಿ ಗೆದ್ದ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಏನಾಯ್ತು?. ಬೊಮ್ಮಾಯಿ ಅವರೇ 2023ಕ್ಕು ಮುಖ್ಯಮಂತ್ರಿ ಆಗೋದು ಖಚಿತವಾಗಿದೆ. ಹಾಗಾಗಿ ಬೊಮ್ಮಾಯಿ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದೀರಿ. ಮೊದಲು ಈ ರೀತಿ ತಂತ್ರಗಾರಿಕೆಯನ್ನು ಮಾಡೋದು ಬಿಡಿ" ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.