Bengaluru-Mysuru expressway: ಹೆದ್ದಾರಿ ಪರಿಶೀಲನೆ ಕಾರ್ಯಕ್ರಮವನ್ನ ರದ್ದುಪಡಿಸಿದ ಸಿದ್ದರಾಮಯ್ಯ, ಏಕೆ? ಇಲ್ಲಿದೆ ವಿವರ
ಮಾಜಿ ಸಿಎಂ ಸಿದ್ದರಾಮಯ್ಯನವರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಪರಿಶೀಲನೆ ಕಾರ್ಯಕ್ರಮವನ್ನು ದಢೀರ್ ರದ್ದುಗೊಳಿಸಿದ್ದೇಕೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ
ಮೈಸೂರು, ಮಾರ್ಚ್, 09: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣದ ವಿಚಾರವಾಗಿ ಬಿಜೆಪಿ ಮತ್ತು ನಡುವೆ ಕ್ರೆಡಿಟ್ ವಾರ್‌ಗಳು ನಡೆಯುತ್ತಲೇ ಇವೆ. ಇದರ ಬೆನ್ನಲ್ಲೇ ಈ ದಶಪಥ ಹೆದ್ದಾರಿಯನ್ನು ಗುರುವಾರ (ಮಾರ್ಚ್ 9) ಪರಿಶೀಲನೆ ಮಾಡುತ್ತೇನೆ ಎಂದು ಇತ್ತೀಚೆಗಷ್ಟೇ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದರು. ಆದರೆ ಇದೀಗ ಕೊನೇ ಗಳಿಗೆಯಲ್ಲಿ ಹೆದ್ದಾರಿ ಪರಿಶೀಲನೆ ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ. ಹಾಗಾದರೆ ಸಿದ್ದರಾಮಯ್ಯನವರು ಹೆದ್ದಾರಿ ಪರಿಶೀಲನೆ ರದ್ದುಗೊಳಿಸಿದ್ದು ಯಾಕೆ ಅನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಈಗಾಗಲೇ ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿಗಳು ನಡೆಯುತ್ತಿವೆ. ಇದರ ಬೆನ್ನಲ್ಲೆ ಕೆಲವು ರಸ್ತೆ ಕಾಮಗರಿಗಳ ವಿಚಾರದಲ್ಲೂ ಕೂಡ ಕ್ರೆಡಿಟ್ ವಾರ್‌ಗಳು ಶುರುವಾಗಿವೆ. ಹಾಗೆಯೇ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣಕ್ಕೆ ಕಾಂಗ್ರೆಸ್‌ನ ಕೊಡುಗೆ ಅಪಾರವಾಗಿದೆ. ಈ ಕುರಿತು ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹಗೆ ಇತ್ತೀಚೆಗಷ್ಟೇ ಸಿದ್ದರಾಮಯ್ಯನವರು ಚಾಲೆಂಜ್ ಮಾಡಿದ್ದರು.

ಹೆದ್ದಾರಿ ಪರಿಶೀಲನೆ ಕಾರ್ಯಕ್ರಮ ರದ್ದು
ಗುರುವಾರ (ಮಾರ್ಚ್ 09)ರಂದು ಹೆದ್ದಾರಿ ಪರಿಶೀಲನೆ ಮಾಡಿ ದಾಖಲೆ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದರು. ಆದರೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಳುಹಿಸುವುದಕ್ಕೆ ಬುಧವಾರ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ನಡೆದಿದೆ. ರಾತ್ರಿಯೇ ನವದೆಹಲಿಗೆ ಮೊದಲ ಪಟ್ಟಿಯನ್ನು ಕಳುಹಿಸಬೇಕಿತ್ತು. ಆದರೆ ಉಳಿದ ಕ್ಷೇತ್ರಗಳ ಬಗ್ಗೆಯೂ ಚರ್ಚಿಸಬೇಕಾಗಿದೆ. ಆದ್ದರಿಂದ ಗುರುವಾರವೂ ಸಭೆ ಮುಂದುವರೆಯಲಿದ್ದು, ಹೀಗಾಗಿ ಸಿದ್ದರಾಮಯ್ಯನವರು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಪರಿಶೀಲನೆ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಗುರುವಾರ (ಮಾರ್ಚ್ 9) ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಅನ್ನು ಪರಿಶೀಲನೆ ಮಾಡಲಿದ್ದಾರೆ. ಹಾಗೆಯೇ ಈ ರಸ್ತೆ ನಿರ್ಮಾಣಕ್ಕೆ ಕಾಂಗ್ರೆಸ್ ಕೊಡುಗೆಯನ್ನು ದಾಖಲೆ ಸಮೇತ ಜನತೆಗೆ ತಿಳಿಸಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾಹಿತಿ ನೀಡಿದ್ದರು. ಆದರೆ ಇದೀಗ ಈ ಕಾರ್ಯಕ್ರಮ ರದ್ದಾಗಿದೆ.

ಬಿಜೆಪಿ ವಿರುದ್ಧ ವಾಗ್ದಾಳಿ
ಎಕ್ಸ್‌ಪ್ರೆಸ್ ವೇಗೆ 9,150 ಕೋಟಿ ರೂಪಾಯಿ ಖರ್ಚಾಗಿದೆ. ಕಾಂಗ್ರೆಸ್ 9 ಪೈಸೆ ಕೊಟ್ಟಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ದಾಖಲೆ ಬಿಡುಗಡೆಯ ಬಳಿಕ ಸಂಸದರು ತಮ್ಮ ಮಾತಿಗೆ ಬದ್ಧರಾಗಿ ರಾಜೀನಾಮೆ ಸಲ್ಲಿಸುವಂತೆ ಒತ್ತಾಯಿಸುತ್ತೇವೆ ಎಂದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಟೀ, ಕಾಫಿ, ಬಿಸ್ಕೆಟ್‌ಗೆ 200 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಮೈಸೂರಿನ ಎನ್.ಆರ್.ರಮೇಶ್ ಆರೋಪ ಮಾಡಿದ್ದಾರೆ. ಹಾಗಿದ್ದರೆ ಅವರು ದಾಖಲೆ ಸಲ್ಲಿಸಬೇಕು ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications