Bengaluru-Mysuru Expressway: ₹1,200 ಕೋಟಿ ವೆಚ್ಚದ ಯೋಜನೆಗೆ ಚಾಲನೆ ನೀಡಲಿರುವ ಗಡ್ಕರಿ-ಮಾಹಿತಿ, ವಿವರ
ಮೈಸೂರು, ಮಾರ್ಚ್, 08: ಈಗಾಗಲೇ ರಾಜ್ಯದಲ್ಲಿ ಹಲವೆಡೆ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಲಿವೆ. ಹಾಗೆಯೇ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಾರ್ಚ್ 10ರಂದು ಮೈಸೂರಿಗೆ ಆಗಮಿಸಲಿದ್ದು, ಈ ವೇಳೆ ಅವರು ಮಹಾರಾಜ ಕಾಲೇಜು ಮೈದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಅವರು ಮಾಹಿತಿ ನೀಡಿದ್ದಾರೆ. ಹಾಗಾದರೆ ಎಷ್ಟು ಕೋಟಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿಯಲ್ಲಿ ಪ್ರಮುಖ ನಗರಗಳಿಗೆ 1,200 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಾಣ ಮಾಡುವ ಯೋಜನೆಗೆ ಚಾಲನೆ ನೀಡಲಿದ್ದಾರೆ. ಮೈಸೂರು-ಕುಶಾಲನಗರ ಚುತುಷ್ಪಥ ನಿರ್ಮಾಣ ಕಾಮಗಾರಿಗೂ ಭೂಮಿಪೂಜೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

ನಗರದ ಕ್ರಾಫರ್ಡ್ ಪಕ್ಕದಲ್ಲಿರುವ ಲೆವೆಲ್ ಕ್ರಾಸಿಂಗ್ 1 ಹಾಗೂ ರಾಯಲ್ ಇನ್ ಬಳಿಯ ಲೆವೆಲ್ ಕ್ರಾಸಿಂಗ್ 5ರಲ್ಲಿ ರೈಲು ಸೇತುವೆಗಳ ನಿರ್ಮಾಣ, ಮೈಸೂರು ರಿಂಗ್ ರಸ್ತೆಯಲ್ಲಿ ಏಳು ಕಡೆ ಗ್ರೇಡ್ ಸಪರೇಟರ್‌ಗಳ ನಿರ್ಮಾಣ, ವಿವಿಧ ರಸ್ತೆಗಳಲ್ಲಿನ ಅಪಘಾತ ವಲಯಗಳ ದುರಸ್ತಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಮೈಸೂರು-ನಂಜನಗೂಡು ರಸ್ತೆಯನ್ನು ಆರು ಪಥಗಳನ್ನಾಗಿ ನಿರ್ಮಿಸುವ ಯೋಜನೆಯನ್ನು ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ತಿಳಸಿದರು.
ಒಟ್ಟಿನಲ್ಲಿ ನಿತಿನ್ ಗಡ್ಕರಿ ಅವರು ಈಗಾಗಲೇ ದೇಶದ ಹಲವೆಡೆ ದೊಡ್ಡ ದೊಡ್ಡ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ಧಾರೆ. ಮತ್ತೊಂದೆಡೆ ನಿರ್ಮಾಣವಾದ ಹೆದ್ದಾರಿಗಳ ಉದ್ಘಾಟನೆಯನ್ನು ಕೂಡ ನೆರವೇರಿಸಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣವಾದಗಲೂ ಕೂಡ ಭೇಟಿ ನೀಡಿ ಉದ್ಘಾಟನೆ ಮಾಡಿದ್ದರು. ಇದೀಗ ಮತ್ತೆ ಸಾಂಸ್ಕೃತಿಕ ನಗರಿ ಮೈಸೂರಿಗೆ ಬರಲಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆ ಮತದಾರರನ್ನು ಸೆಳೆಯಲು ಎಲ್ಲಾ ಪಕ್ಷಗಳ ನಾಯಕರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ಇದೀಗ ಹಲವು ಯೋಜನೆಗಳ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನಗಳು ಕೂಡ ನಡೆಯುತ್ತಿವೆ.












Click it and Unblock the Notifications