ಚಾಮುಂಡೇಶ್ವರಿ ಮುಂದೆ ವಿಶೇಷ ಫೈಲ್ ಇಟ್ಟು ಪೂಜೆ ಮಾಡಿಸಿದ ಯತ್ನಾಳ್
ನಿನ್ನೆಯಷ್ಟೇ ಬಿಜೆಪಿ ರೆಬೆಲ್‌ಗಳ ಸಭೆ ನಡೆಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಾರೆ. ತಾಯಿ ಚಾಮುಂಡೇಶ್ವರಿ ಮುಂದೆ ಫೈಲ್‌ವೊಂದನ್ನು ಇಟ್ಟು ವಿಶೇಷ ಪೂಜೆ ಮಾಡಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇಷ್ಟಕ್ಕೂ ಯತ್ನಾಳ್ ಅವರು ಚಾಮುಂಡೇಶ್ವರಿ ಮುಂದಿಟ್ಟ ಫೈಲ್ ಯಾವುದು? ಅದರಲ್ಲೇನಿದೆ? ಎಂಬ ಕುತೂಹಲ ಮೂಡಿದೆ.
ಚಾಮುಂಡೇಶ್ವರಿ ತಾಯಿಗೆ ಮುಂದೆ ಫೈಲ್ ಇಟ್ಟು ಪೂಜೆ ಮಾಡಿಸಿರುವುದು ಅಚ್ಚರಿ ಮೂಡಿಸಿದೆ. ಸದ್ಯ ಈಗ ಆ ಫೈಲ್ ಬಗ್ಗೆಯೇ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಯತ್ನಾಳ್ ಅವರು ನಿನ್ನೆ ನಡೆದ ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿರುವ ಸಾಧ್ಯತೆ ಇದೆ. ಬಹುಶಃ ಹೈಕಮಾಂಡ್‌ಗೆ ನೀಡಲು ಈ ಫೈಲ್ ಸಿದ್ಧಪಡಿಸಿರಬಹುದು ಹಾಗೂ ಈ ಫೈಲ್‌ನಲ್ಲಿ ಮಹತ್ವದ ವಿಚಾರ ಇರಬಹುದು ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ಜೋರಾಗಿವೆ.

ಇತ್ತೀಚೆಗೆ ಕೇಂದ್ರ ಬಿಜೆಪಿ ಶಿಸ್ತು ಸಮಿತಿಯು ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಯತ್ನಾಳ್ ಅವರು ಕೂಡ ಉತ್ತರ ನೀಡಿದ್ದರು. ಈ ಉತ್ತರ ನೀಡಿದ ಪ್ರತಿಯನ್ನು ಫೈಲ್‌ನಲ್ಲಿ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ಯತ್ನಾಳ್ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಹೈಕಮಾಂಡ್ ನೋಟಿಸ್‌ಗೆ ಕೊಟ್ಟಿದ್ದ ಉತ್ತರದಲ್ಲಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಅನೇಕ ಆರೋಪಗಳನ್ನು ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ಮಹತ್ವದ ವಿಚಾರಗಳನ್ನು ಕೂಡ ಇದರಲ್ಲಿ ಹಂಚಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದ್ದು, ನಾಡಿನ ಅಧಿದೇವತೆ ಚಾಮುಂಡಿ ತಾಯಿಯ ಬಳಿ ಶಾಸಕ ಯತ್ನಾಳ್ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ತಮ್ಮ ಮುಂದಿನ ನಿರ್ಧಾರಕ್ಕೆ ದೇವಿಯ ಅನುಗ್ರಹ ಕೇಳಿದ್ದಾರೆ ಎನ್ನಲಾಗಿದೆ.

ಈಗಾಗಲೇ ಯತ್ನಾಳ್ ಅವರು ವಿಜಯೇಂದ್ರ ವಿರುದ್ಧ ಸಮರ ಸಾರಿ, ದೆಹಲಿಗೆ ಎರಡು ಬಾರಿ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಬಂದಿದ್ದಾರೆ. ಯತ್ನಾಳ್ ಬಣದಿಂದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆಯೂ ನಿನ್ನೆ ನಡೆದ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ. ಈ ಹಿನ್ನೆಲೆ ಇಂದು ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ, ಈ ಫೈಲ್‌ಗೆ ವಿಶೇಷ ಪೂಜೆ ಸಲ್ಲಿಸಿ ಸಂಚಲನ ಸೃಷ್ಟಿದ್ದಾರೆ.
ಬಿಜೆಪಿ ಬಂಡಾಯ ನಾಯಕರು ಮೊದಲಿನಿಂದಲೂ ಚಾಮುಂಡಿ ತಾಯಿಯ ಮೊರೆ ಹೋಗಿದ್ದರು. ಈ ಹಿಂದೆಯೂ ಅವರು ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿದ ಬಳಿಕವೇ ಬಂಡಾಯದ ಕಹಳೆ ಮೊಳಗಿಸಿದ್ದರು. ರಾಜ್ಯಾಧ್ಯಕ್ಷ ಸ್ಥಾನ ಬಿ.ವೈ.ವಿಜಯೇಂದ್ರ ಅವರನ್ನು ಕೆಳಗಿಳಿಸುವ ಸಂಬಂಧ ಬಂಡಾಯದ ಬಾವುಟ ಹಾರಿಸಿದ್ದ ಶಾಸಕ ಯತ್ನಾಳ್ ಅವರು ಇತ್ತೀಚೆಗೆ ಮೂರನೇ ಬಾರಿಗೆ ಚಾಮುಂಡಿದೇವಿಯ ದರ್ಶನ ಪಡೆದಿದ್ದಾರೆ. ಹಾಗಾಗಿ ಈ ಫೈಲ್ ಮಹತ್ವ ಪಡೆದುಕೊಂಡಿದೆ.
ಯತ್ನಾಳ್ ಹೇಳಿದ್ದೇನು?: ಈ ಬಗ್ಗೆ ಎಕ್ಸ್‌ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸುಪ್ರೀಂ ಕೋರ್ಟ್ ಆದೇಶಾನುಸಾರ ನಮ್ಮ ಸಿದ್ದಸಿರಿ ಪವರ್ ಹಾಗೂ ಎಥನಾಲ್ ಕಾರ್ಖಾನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದೆ ಎಂದಿದ್ದಾರೆ. ಈ ಸಂಬಂಧ ನಾನು ನಾಡದೇವತೆ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪೂಜೆ ಸಲ್ಲಿಸಿದ್ದೇನೆ. ಚಿಂಚೋಳಿ ತಾಲ್ಲೂಕಿನಲ್ಲಿರುವ ನಮ್ಮ ಕಾರ್ಖಾನೆ ಆರಂಭವಾಗುವುದರಿಂದ ನೂರಾರು ಉದ್ಯೋಗ ಸೃಷ್ಟಿಯಾಗುತ್ತದೆ ಹಾಗು ರೈತರ ಏಳಿಗೆಗೆ ನಾಂದಿಯಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.












Click it and Unblock the Notifications