ಆಗಷ್ಟೇ ಹುಟ್ಟಿದ ಹೆಣ್ಣು ಕೂಸಿನ ಕತ್ತು ಸೀಳಿ, ಚರಂಡಿಗೆ ಎಸೆದವರು ಯಾರು?
ಮೈಸೂರು, ಸೆಪ್ಟೆಂಬರ್ 4: ನವಜಾತ ಶಿಶುವಿನ ಕತ್ತು ಸೀಳಿ, ಚರಂಡಿಗೆ ಎಸೆದಿರುವ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ. ಹುಣಸೂರಿನ ಹನಗೋಡು ಗ್ರಾಮದ ಚರಂಡಿಯೊಂದರಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.
ಮಗುವಿನ ದೇಹವಿಡೀ ರಕ್ತದಲ್ಲಿ ತೊಯ್ದಿದೆ. ತುಂಡು ಬಟ್ಟೆಯನ್ನೂ ಹಾಕಿಲ್ಲ. ಸತ್ತ ಆ ಮಗುವನ್ನು ಚರಂಡಿಯಲ್ಲಿ ಕಂಡ ದಾರಿ ಹೋಕರೊಬ್ಬರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಮಗುವಿನ ಮೃತ ದೇಹವನ್ನು ಹೊರತೆಗೆದು ಪರೀಕ್ಷೆಗೆ ಕಳುಹಿಸಿದ್ದಾರೆ.
"ನಿರ್ಜನ ಪ್ರದೇಶದಲ್ಲಿ ಮಗುವಿನ ದೇಹ ಪತ್ತೆಯಾಗಿದ್ದು, ಹೆಣ್ಣು ಮಗು ಎಂಬ ಕಾರಣಕ್ಕೆ ಹೀಗೆ ಮಾಡಿರಬಹುದು. ಮಗುವಿನ ಕತ್ತನ್ನು ಸೀಳಲಾಗಿದ್ದು, ರಕ್ತಸ್ರಾವವಾಗಿ ಮಗು ಸಾವನ್ನಪ್ಪಿದೆ. ಮಗು ಹುಟ್ಟಿದ ಒಂದು ದಿನದ ಒಳಗೇ ಈ ಕೃತ್ಯ ನಡೆದಿದೆ" ಎಂದು ಪೊಲೀಸರು ತಿಳಿಸಿದ್ದಾರೆ.

ಕೊಳವಿಗೆ ರಸ್ತೆಯಲ್ಲಿ ನಿವಾಸಿಯೊಬ್ಬರು ಮಗುವಿನ ಮೃತದೇಹ ನೋಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ಚರಂಡಿಗೆ ಬಿಸಾಡಿರುವ ಸಾಧ್ಯತೆಯಿದೆ. ಈ ಸಂಬಂಧ ಗ್ರಾಮ ಪಂಚಾಯಿತಿ ಸದಸ್ಯ ಇಮ್ತಿಯಾಜ್ ಪಾಶಾ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications