ಬೆಂಗಳೂರಾಯ್ತು, ಈಗ ನಂಜನಗೂಡಿನಲ್ಲಿ ಕರುವಿನ ಬಾಲ ಕತ್ತರಿಸಿ ವಿಕೃತಿ
ಮೈಸೂರು, ಜನವರಿ 17: ನಮ್ಮ ರಾಜ್ಯದಲ್ಲಿ ಮೂಕ ಪ್ರಾಣಿಗಳ ಮೇಲೆ ಕಿಡಿಗೇಡಿಗಳ ದೌರ್ಜನ್ಯಕ್ಕೆ ಅಂತ್ಯ ಇಲ್ಲದಂತಾಗಿದೆ. ರಸ್ತೆಯ ಸಮೀಪದಲ್ಲಿ ಮಲಗಿರುವ ಹಸು- ನಾಯಿಗಳ ಮೇಲೆ ವಾಹನ ಚಲಾಯಿಸುವ ಅನೇಕ ಘಟನೆಗಳು ನಡೆಯುತ್ತಿದ್ದು, ಈ ಮಧ್ಯೆ ಬೆಂಗಳೂರಿನಲ್ಲಿ ನಡೆದ ಹಾಲು ತುಂಬಿದ ಮೂರು ಹಸುಗಳ ಕೆಚ್ಚಲಿಗೆ ಚಾಕು ಹಾಕಿದ ಘಟನೆ ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು.
ವ್ಯಕ್ತಿಯೊಬ್ಬ ರಾತ್ರಿ ವೇಳೆ ಕುಡಿದ ಮತ್ತಿನಲ್ಲಿ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಘಟನೆ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ನಡೆದಿದ್ದು, ಘಟನೆ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಈ ಘಟನೆ ಮಾಡುವ ಮುನ್ನವೇ ಕಿಡಿಗೇಡಿಗಳು ಕುರುವೊಂದರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಈ ಘಟನೆ ನಡೆದಿರುವುದು ಬೇರೆಲ್ಲೂ ಅಲ್ಲ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ನಡೆದಿದೆ. ನಂಜನಗೂಡಿನ ನಂಜುಂಡೇಶ್ವರನಿಗೆ ಹರಕೆ ರೂಪದಲ್ಲಿ ಬಿಟ್ಟ ಕರುವಿನ ಬಾಲವನ್ನು ದುಷ್ಕರ್ಮಿಗಳು ಕತ್ತರಿಸಿ ಪರಾರಿಯಾಗಿದ್ದಾರೆ. ರಕ್ತ ಸಿಕ್ತವಾದ ಕರುವನ್ನು ನೋಡುತ್ತಿದ್ದಂತೆ ಸ್ಥಳೀಯರು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂಜನಗೂಡಿನ ಹಳ್ಳದ ಕೇರಿಯ ರಾಮಮಂದಿರದ ಬಳಿ ಕರುವನ್ನು ತೆಗೆದುಕೊಂಡು ಬಂದು, ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಭಕ್ತರು ನಂಜನಗೂಡಿನ ನಂಜುಂಡೇಶ್ವರನಿಗೆ ಹರಕೆ ರೂಪದಲ್ಲಿ ದನ-ಕರುಗಳನ್ನು ಅರ್ಪಿಸುತ್ತಾರೆ. ಆದರೆ ಅವುಗಳಿಗೆ ಸೂಕ್ತವಾದ ರಕ್ಷಣೆ ಇಲ್ಲ. ಇದೇ ಮೊದಲ ಘಟನೆ ಅಲ್ಲ, ಅನೇಕ ಬಾರಿ ಕಿಡಿಗೇಡಿಗಳು ಹಸುಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಇಂತಹ ಘಟನೆಗಳು ನಿಲ್ಲಬೇಕು. ದೇವಸ್ಥಾನದ ಹಸು, ಕರುಗಳಿಗೆ ಮೊದಲಿನಂತೆ ದೇವಸ್ಥಾನದ ಶಿವಲಿಂಗದ ಮುದ್ರೆ ಹಾಕಿ, ಅವುಗಳಿಗೆ ಇರಲು ಸೂಕ್ತ ಸ್ಥಳ ಮತ್ತು ಆಹಾರದ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಭಕ್ತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ನಂಜನಗೂಡಿನ ಇಓ ಜಗದೀಶ್ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದುಕೊಂಡರು. ಹಸು-ಕರುಗಳ ರಕ್ಷಣೆಗಾಗಿ ತಾತ್ಕಾಲಿಕ ಗೋಶಾಲೆಯನ್ನು ತೆರೆಯುವುದಾಗಿ ಭರವಸೆ ನೀಡಿದ ಅವರು, ಭಕ್ತರಿಗೂ ಕೆಲವು ಸೂಚನೆಗಳನ್ನು ನೀಡಿದರು. ಇನ್ನು ಮುಂದೆ ಭಕ್ತರು ದೇವಸ್ಥಾನಕ್ಕೆ ಹರಕೆ ರೂಪದಲ್ಲಿ ನೀಡುವ ಹಸು ಹಾಗೂ ಕರುಗಳ ಬಗ್ಗೆ ಅಧಿಕೃತವಾಗಿ ದೇವಸ್ಥಾನಕ್ಕೆ ಮಾಹಿತಿ ನೀಡಿ ರಶೀದಿ ಪಡೆಯಬೇಕು ಎಂದು ಹೇಳಿದರು. ಅಲ್ಲದೇ ಈ ಪ್ರಕರಣ ಎಸಗಿದ ದುಷ್ಕರ್ಮಿಗಳಿಗೆ ಶಿಕ್ಷೆ ನೀಡುವ ಭರವಸೆ ನೀಡಿದರು.












Click it and Unblock the Notifications