ನರಭಕ್ಷಕ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಲು ಆದೇಶ
ಮೈಸೂರು, ಡಿ. 4 : ಈವರೆಗೆ ನಾಲ್ವರನ್ನು ಬಲಿ ಪಡೆದು ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ಕಾಡಿನಲ್ಲಿ ಅಡಗಿರುವ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಸರ್ಕಾರ ಆದೇಶ ನೀಡಿದೆ. ಮಂಗಳವಾರ ಸಂಜೆ ಎಚ್.ಡಿ.ಕೋಟೆ ತಾಲೂಕಿನ ಚಿಕ್ಕಬರಗಿ ಗ್ರಾಮದ ಬಸಪ್ಪ (55) ಎಂಬುವವರನ್ನು ಹುಲಿ ಕೊಂದು ಹಾಕಿತ್ತು. ಇದೆವೇಳೆ ಹುಲಿದಾಳಿಯಿಂದ ಮೃತಪಟ್ಟ ನಾಲ್ವರ ಕುಟುಂಬದವರಿಗೆ ಸರ್ಕಾರ ಐದು ಲಕ್ಷ ರೂ. ಪರಿಹಾರ ಘೋಷಿಸಿದೆ. [ಓದುಗರ ಆಕ್ರೋಶ]
ನಾಲ್ಕನೇ ಬಲಿ : ಕಳೆದ ಎರಡು ವಾರಗಳಿಂದ ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಅರಣ್ಯದಂಚಿನ ಜನರಲ್ಲಿ ಆತಂಕ ಮೂಡಿಸಿರುವ ನರಭಕ್ಷಕ ಹುಲಿ ಮತ್ತೂಂದು ಬಲಿ ಪಡೆದಿದೆ. ಮಂಗಳವಾರ ಸಂಜೆ ದನ ಮೇಯಿಸಲು ಹೋಗಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿ ಆತನನ್ನು ಕೊಂದು ಹಾಕಿದೆ. ಇದರಿಂದಾಗಿ ಒಂದುವಾರದಲ್ಲಿ ಹುಲಿ ನಾಲ್ಕನೇ ಬಲಿ ಪಡೆದಿದೆ.
ನರಭಕ್ಷಕ ಹುಲಿಗೆ ಬಲಿಯಾದ ವ್ಯಕ್ತಿಯನ್ನು ಎಚ್.ಡಿ.ಕೋಟೆ ತಾಲೂಕಿನ ಚಿಕ್ಕಬರಗಿ ಗ್ರಾಮದ ಬಸಪ್ಪ (55) ಎಂದು ಗುರುತಿಸಲಾಗಿದೆ. ಇದಕ್ಕೂ ಮೊದಲು ನ.27ರಂದು ನೆಡ್ಯಾಡಿಯ ಬಸವರಾಜ್, ನ.29 ರಂದು ಸೀಗೋಡಿ ಹಾಡಿಯ ಚೆಲುವ, ನ.30ರಂದು ಡಿ.ಪಿ.ಕುಪ್ಪೆ ವಾಸಿ ಅರಣ್ಯ ಇಲಾಖೆಯ ವಾಚರ್ ಸುರೇಶ್ ಅವರನ್ನು ಹುಲಿ ಕೊಂದು ಹಾಕಿತ್ತು.

ಘಟನೆಯ ವಿವರ : ಮಂಗಳವಾರ ಸಂಜೆ ಬಸಪ್ಪ ಬಂಡೀಪುರ ಅರಣ್ಯದ ಸಮೀಪವಿರುದ ತಮ್ಮ ಜಮೀನಿನಲ್ಲಿ ದನ ಮೇಯಿಸುತ್ತಿದ್ದರು. ಸಂಜೆ ಸುಮಾರು ಸಂಜೆ 5ರಿಂದ 6 ಗಂಟೆ ಸಮಯದಲ್ಲಿ ಹುಲಿ ದಾಳಿ ಅವರ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. (ಮೈಸೂರಿನಲ್ಲಿ ಆನೆ ಉಪಟಳ)
ಬಸಪ್ಪ ಮೃತದೇಹವನ್ನು ಸುಮಾರು ದೂರ ಹೊತ್ತೂಯ್ದು ಪೊದೆಯ ಬಳಿ ಅವರ ತಲೆಯೊಂದನ್ನು ಬಿಟ್ಟು ಉಳಿದ ಭಾಗವನ್ನು ತಿಂದು ಹಾಕಿದೆ. ಬಸಪ್ಪ ಮೇಯಿಸುತ್ತಿದ್ದ ಹಸುವೊಂದೇ ಮನೆಗೆ ಹಿಂತಿರುಗಿದಾಗ ಗಾಬರಿಗೊಂಡ ಮನೆಯವರು ಹಾಗೂ ಗ್ರಾಮಸ್ಥರು ಹುಡುಕಾಡಿದಾಗ ಜಮೀನಲ್ಲಿ ಮೃತರ ರುಂಡ ಸಿಕ್ಕಿದೆ.
ಕಾರ್ಯಾಚರಣೆ ಸ್ಥಗಿಗೊಂಡಿತ್ತು : ಒಂದು ವಾರದಲ್ಲಿ ಮೂವರನ್ನು ಹುಲಿ ಬಲಿಪಡೆದ ನಂತರ ನರಹಂತಕ ಹುಲಿ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ದಸರಾ ಆನೆಗಳ ಸಹಾಯದಿಂದ ಕೂಂಬಿಂಗ್ ನಡೆಸಿದ್ದ ಅಧಿಕಾರಿಗಳು, ಸೋಮವಾರ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು.
ಗ್ರಾಮಸ್ಥರ ಪ್ರತಿಭಟನೆ : ಒಂದು ವಾರದಲ್ಲಿ ಹುಲಿಗೆ ನಾಲ್ಕು ಮಂದಿ ಬಲಿಯಾದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಚಿಕ್ಕಬರಗಿ ಗ್ರಾಮಸ್ಥರು ಅರಣ್ಯ ಇಲಾಖೆ ಶಿಬಿರವನ್ನು ಧ್ವಂಸಗೊಳಿಸಿದ್ದಾರೆ. ಇಲಾಖೆಗೆ ಸೇರಿದ ವಾಹನಗಳನ್ನು ಜಖಂ ಗೊಳಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಅರಣ್ಯ ಇಲಾಖೆ ಸರಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.












Click it and Unblock the Notifications