ಲೋಕಸಭಾ ಚುನಾವಣೆ 2019:ಸಾಮಾಜಿಕ ಜಾಲತಾಣದಲ್ಲಿ ಪ್ರಚಾರದ ಭರಾಟೆ
Recommended Video

ಮೈಸೂರು, ಮಾರ್ಚ್ 27:ಲೋಕಸಭಾ ಚುನಾವಣೆಗೆ ಹುರಿಯಾಳುಗಳು ತಮ್ಮ ನಾಮಪತ್ರ ಗುಜರಾಯಿಸಿ ಆಯಿತು. ಇನ್ನೇನಿದ್ದರೂ ಚುನಾವಣಾ ಪ್ರಚಾರದ ಅಬ್ಬರ. ಇದಕ್ಕೆ ಪುಷ್ಠಿ ಕೊಡುವಂತೆ ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಬಿಜೆಪಿ ಜತೆಗೆ ಇತರೆ ಪಕ್ಷಗಳೂ ದಾಂಗುಡಿ ಇಟ್ಟಿವೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಳೆದ ಬಾರಿ ಬಿಜೆಪಿಯಷ್ಟೇ ಹೆಚ್ಚು ಸಕ್ರಿಯವಾಗಿತ್ತು. ಅತ್ಯಂತ ಸಮರ್ಪಕವಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಯುವ ಮನಸ್ಸುಗಳನ್ನು ಅದು ತಲುಪಿತ್ತು.
2014ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ 17,23,134 ಮತದಾರರಿದ್ದರು. ಈ ಬಾರಿ 20,14,711 ಮತದಾರರು ಇದ್ದಾರೆ. ಅಂದರೆ, 2.91 ಲಕ್ಷ ಹೆಚ್ಚು ಮತದಾರರು ಕ್ಷೇತ್ರದಲ್ಲಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿ ಅಂಶಗಳು ಹೇಳುತ್ತವೆ.
ಇವರಲ್ಲಿ ಹೊರಗಿನಿಂದ ಬಂದವರ ಜತೆಗೆ ಹೊಸ ಮತದಾರರೂ ಇದ್ದಾರೆ. ಇವರು ಅಭ್ಯರ್ಥಿಯ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುವುದು ಖಚಿತ ಎಂದೇ ವಿಶ್ಲೇಷಿಸಲಾಗುತ್ತಿದೆ. ಹೊಸ ಮತದಾರರನ್ನು ಸೆಳೆಯಲೆಂದೇ ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮಗಳ ಮೊರೆ ಹೋಗಲು ಭರದ ಸಿದ್ಧತೆ ನಡೆಸಿವೆ. ಕಳೆದ ಬಾರಿ ಸಮರ್ಥವಾಗಿ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡಿದ್ದ ಪ್ರತಾಪಸಿಂಹ ಅದರಲ್ಲಿ ಸಕ್ರಿಯರಾಗಿರುವ ಮೂಲಕ ತಮ್ಮದೇ ಆದ ದೊಡ್ಡ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಮುಂದೆ ಓದಿ...

ಫೇಸ್ ಬುಕ್ ನಲ್ಲಿ ಸಕ್ರಿಯವಾದ ಪ್ರತಾಪ್ ಸಿಂಹ
ಪ್ರತಾಪ್ ಸಿಂಹ ಫೇಸ್ ಬುಕ್ ಖಾತೆಯಲ್ಲಿ 5 ಲಕ್ಷ ಜನರು ಫಾಲೋ ಮಾಡುತ್ತಿದ್ದಾರೆ. ಮೋದಿ ಮತ್ತೊಮ್ಮೆ ಅಭಿಯಾನವನ್ನು ಇದರಲ್ಲಿ ಈಗಾಗಲೇ ಆರಂಭಿಸಿದ್ದು, ಖ್ಯಾತ ನಾಮರ ಅಭಿಪ್ರಾಯಗಳನ್ನು ಹಾಕಲಾಗಿದೆ. ಮೋದಿ ಪರವಾಗಿ ಕಾಂಗ್ರೆಸ್ ನಾಯಕರು ನೀಡಿರುವ ಹೇಳಿಕೆಗಳನ್ನೂ ಇದರಲ್ಲಿ ಉದಾಹರಿಸಲಾಗಿದೆ. ತಮ್ಮ ದೈನಂದಿನ ರಾಜಕೀಯ ದಿನಚರಿಯನ್ನು ಇದರಲ್ಲಿ ದಾಖಲಿಸುವ ಮೂಲಕ ಜೀವಂತಿಕೆಯನ್ನು ಕಾಪಾಡಿಕೊಂಡಿದ್ದಾರೆ.

ತಡವಾಗಿ ತೆರೆದ ಮೈಸೂರು ಜಿಲ್ಲಾ ಕಾಂಗ್ರೆಸ್
ಮೈಸೂರು ಜಿಲ್ಲಾ ಕಾಂಗ್ರೆಸ್ ಫೇಸ್‌ಬುಕ್ ಪುಟವನ್ನು ಸ್ವಲ್ಪ ತಡವಾಗಿ ತೆರೆದಿದೆ. ಇದನ್ನು ಸದ್ಯ 2 ಸಾವಿರ ಮಂದಿ ಫಾಲೋ ಮಾಡುತ್ತಿದ್ದಾರೆ. ಇದರಲ್ಲೂ ನಿತ್ಯ ರಾಜಕೀಯ ಕುರಿತಾದ ವಿಚಾರಗಳನ್ನು ಹಾಕಲಾಗುತ್ತಿದ್ದು, ನಿರಂತರತೆಯನ್ನು ಉಳಿಸಿಕೊಳ್ಳಲಾಗಿದೆ. ಇದೇ ರೀತಿ ಕಾಂಗ್ರೆಸ್‌ನ ಚಾಮುಂಡೇಶ್ವರಿ, ವರುಣಾ ಮೊದಲಾದ ವಿಧಾನಸಭಾ ಕ್ಷೇತ್ರಗಳ ಫೇಸ್‌ಬುಕ್ ಪುಟಗಳೂ ಸಕ್ರಿಯವಾಗಿವೆ.

ಹದ್ದಿನ ಕಣ್ಣಿಟ್ಟ ಚುನಾವಣಾ ಆಯೋಗ
ಸಾಮಾಜಿಕ ಮಾಧ್ಯಮಗಳ ಮಹತ್ವ ಅರಿತಿರುವ ಚುನಾವಣಾ ಆಯೋಗ ಈ ಬಾರಿ ಹದ್ದಿನ ಕಣ್ಣಿಡಲು ನಿರ್ಧರಿಸಿದೆ. ರಾಜಕೀಯ ಪಕ್ಷಗಳ ಹಾಗೂ ಅಭ್ಯರ್ಥಿಗಳ ಫೇಸ್‌ಬುಕ್, ಟ್ವಿಟರ್, ವಾಟ್ಸ್ ಅಪ್ ಮೊದಲಾದ ಖಾತೆಗಳ ಮೇಲೆ ನಿಗಾ ವಹಿಸಿದೆ. ಈಗಾಗಲೇ ಉತ್ತರ ಭಾರತದಲ್ಲಿ ಹಲವೆಡೆ ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷಗಳು ಹಾಕಿದ್ದ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ತೆಗೆಯಲು ಸೂಚನೆ ನೀಡಿದೆ.

ಈ ಲೆಕ್ಕಾಚಾರ ಯಾರಿಗೂ ಇರಲಿಲ್ಲ
2014ರ ಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳು ಬಳಕೆಗೆ ಬಂದಿದ್ದರೂ ಈಗ ಇರುವಷ್ಟು ಮಹತ್ವವನ್ನು ಪಡೆದಿರಲಿಲ್ಲ. ದೊಡ್ಡ ದೊಡ್ಡ ಸಮಾವೇಶಗಳಿಗಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಹೆಚ್ಚು ಜನರನ್ನು ತಲುಪಬಹುದು ಎಂಬ ಲೆಕ್ಕಾಚಾರ ಯಾರಿಗೂ ಇರಲಿಲ್ಲ. ಆದರೆ, ಈ ಬಾರಿ ಪರಿಸ್ಥಿತಿ ತೀರಾ ಭಿನ್ನವಾಗಿದೆ. ಅದರಲ್ಲಿಯೂ ಯುವ ಸಮುದಾಯ ಸಾಮಾಜಿಕ ಮಾಧ್ಯಮಗಳನ್ನು ಹೆಚ್ಚೆಚ್ಚು ಬಳಸುತ್ತಿದೆ. ಹೀಗಾಗಿ, ಎಲ್ಲ ರಾಜಕೀಯ ಪಕ್ಷಗಳ ಚಿತ್ತ ಇದರತ್ತ ನೆಟ್ಟಿವೆ.












Click it and Unblock the Notifications