ಮೈಸೂರು ಸ್ವಚ್ಛ ಸರ್ವೇಕ್ಷಣ ಅಭಿಯಾನಕ್ಕೆ ನಟ ಮಂಡ್ಯ ರಮೇಶ್ ರಾಯಭಾರಿ
ಮೈಸೂರು ಆಗಸ್ಟ್, 31: ಮೈಸೂರು ನಗರದ 2023ನೇ ಸಾಲಿನ ಸ್ವಚ್ಛ ಸರ್ವೇಕ್ಷಣ ಅಭಿಯಾನಕ್ಕೆ ರಾಯಭಾರಿಯಾಗಿ ನಟನ ಶಾಲೆ ಸ್ಥಾಪಕ ಹಾಗೂ ನಟ ಮಂಡ್ಯ ರಮೇಶ್ ಆಯ್ಕೆಯಾಗಿದ್ದಾರೆ.
ಇತ್ತೀಚಿಗೆ ನಟ ಮಂಡ್ಯ ರಮೇಶ್ ಅವರನ್ನು ಮೇಯರ್ ಶಿವಕುಮಾರ್ ನೇತೃತ್ವದಲ್ಲಿ ಅಧಿಕೃತವಾಗಿ ಆಹ್ವಾನಿಸಿದರು. ಮೇಯರ್ ಶಿವಕುಮಾರ್ ಅವರ ನೇತೃತ್ವದ ನಿಯೋಗ ನಗರದ ದಟ್ಟಗಳ್ಳಿಯಲ್ಲಿರುವ ಮಂಡ್ಯ ರಮೇಶ್ ಅವರ ನಿವಾಸಕ್ಕೆ ಭೇಟಿ ನೀಡಿ ರಾಯಭಾರಿಯಾಗಿ ನೇಮಕವಾಗಿರುವ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಿ, ಅಧಿಕೃತವಾಗಿ ಆಹ್ವಾನ ನೀಡಿದರು.

ಈ ವೇಳೆ ಮಾತನಾಡಿದ ನಟ ಮಂಡ್ಯ ರಮೇಶ್, ನನ್ನನ್ನು ಆಯ್ಕೆ ಮಾಡಿರುವುದು ತುಂಬ ಸಂತೋಷವಾಗಿದೆ. ನಗರದಲ್ಲಿರುವ ನಮ್ಮ ಬಳಗದವರನ್ನು ಸಾಮಾಜಿಕ ಜಾಲತಾಣದ ಮೂಲಕ ಸ್ವಚ್ಛತೆಯಲ್ಲಿ ತೊಡಿಗಿಸಿಕೊಳ್ಳುವಂತೆ ಪ್ರೇರೇಪಿಸಲಾಗುವುದು. ಅಲ್ಲದೆ, ನಾನು ಕೂಡ ಮೈಸೂರಿನ ಜನತೆಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತೇನೆ' ಎಂದು ಖುಷಿ ಹಂಚಿಕೊಂಡರು.
ಬಳಿಕ ಮಾತನಾಡಿದ ಮೇಯರ್ ಶಿವಕುಮಾರ್, 'ಮಂಡ್ಯ ರಮೇಶ್ ಅವರು ರಂಗಭೂಮಿ ಹಿರಿಯ ಕಲಾವಿದರು. ಚಲನಚಿತ್ರ ನಟರು. 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವಾರು ಟಿವಿ ಶೋಗಳಲ್ಲಿ ಪ್ರಖ್ಯಾತಿ ಜತೆಗೆ ವಿವಿಧ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇಡೀ ಜೀವನವನ್ನು ಕಲೆಗಾಗಿ ಮುಡಿಪಾಗಿಟ್ಟಿರುವವರು.

ಸಾವಿರಾರು ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರನ್ನು ತಯಾರು ಮಾಡಿ, ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ. ಇಂತವರನ್ನು ಸ್ವಚ್ಛ ಸರ್ವೇಕ್ಷಣ ಅಭಿಯಾನಕ್ಕೆ ರಾಯಭಾರಿಯಾಗಿ ಆಯ್ಕೆ ಮಾಡಿರುವುದು ಒಳ್ಳೆಯ ಸಂಗತಿ, ಮೈಸೂರು ಜನರು ಅತ್ಯಂತ ಖುಷಿಯಿಂದ ಒಪ್ಪಿಕೊಂಡಿದ್ದಾರೆ' ಎಂದು ಹೇಳಿದರು.
ಈ ವೇಳೆ ಉಪಮೇಯರ್ ಡಾ.ಜಿ.ರೂಪಾ, ಆಡಳಿತ ಪಕ್ಷದ ನಾಯಕ ಎಂ.ವಿ.ರಾಮ್‌ಪ್ರಸಾದ್, ಜೆಡಿಎಸ್ ಸದಸ್ಯೆ ಅಶ್ವಿನಿ ಅನಂತು, ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಎಂ.ಡಿ.ನಾಗರಾಜು, ಶಾಂತಕುಮಾರಿ, ರಮೇಶ್, ಸವಿತಾ ಸುರೇಶ್, ಅಧಿಕಾರಿಗಳಾದ ಸೋಮಶೇಖರ್, ಡಾ.ಹರ್ಷ, ಮೃತ್ಯುಂಜಯ ಸೇರಿದಂತೆ 9 ಮಂದಿ ಪರಿಸರ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications