ಮೈಸೂರಲ್ಲಿ ಸಕ್ರಿಯ ಕೊರೊನಾ ಸೋಂಕಿತರು ಎಷ್ಟಿದ್ದಾರೆ?
ಮೈಸೂರು, ಜೂನ್ 19: ಜಿಲ್ಲೆಯಲ್ಲಿ ನಿನ್ನೆ ಮತ್ತಿಬ್ಬರಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಆರು ಮಂದಿ ಸೋಂಕಿತರು ಗುಣಮುಖರಾಗಿ ಕೊವಿಡ್ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.
ಮಹಾರಾಷ್ಟ್ರದಿಂದ ಹಿಂದಿರುಗಿರುವ 39 ವರ್ಷದ ಮಹಿಳೆಗೆ ಮತ್ತು ಪಿ-4219ರ ಸಂಪರ್ಕದಲ್ಲಿರುವ 5 ವರ್ಷದ ಬಾಲಕಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 123 ಇದ್ದು, 112 ಮಂದಿ ಗುಣಮುಖರಾಗಿದ್ದಾರೆ. ಆರು ಮಂದಿ ಗುಣಮುಖರಾಗಿರುವುದರಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ 11ಕ್ಕೆ ಇಳಿದಿದೆ. 1,657ಮಂದಿ ಹೋಂ ಕ್ವಾರೆಂಟೈನ್ ನಲ್ಲಿ ಹಾಗೂ 132 ಮಂದಿ ಫೆಸಿಲಿಟಿ ಕ್ವಾರೆಂಟೈನ್ ನಲ್ಲಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಲಾಕ್ ಡೌನ್ ನಿಯಮ ಲೆಕ್ಕಕ್ಕಿಲ್ಲ; ಮೈಸೂರಲ್ಲಿ ಅದ್ದೂರಿ ಬರ್ತ್ ಡೇ ಪಾರ್ಟಿ
ಇದೇ ವೇಳೆ ಕೊವಿಡ್ ದೃಢಪಟ್ಟ ಪಿ-7285 ಬೆಂಗಳೂರು ಸ್ಯಾಟಲೈಟ್ ಬಸ್ ನಿಲ್ದಾಣದಿಂದ ರಾಜಹಂಸ ಬಸ್ಸಿನಲ್ಲಿ (ಕೆಎ-09ಎಫ್4663) ಮೈಸೂರಿಗೆ ಪ್ರಯಾಣ ಮಾಡಿದ್ದು, ಆ ಬಸ್ಸಿನಲ್ಲಿ ಪ್ರಯಾಣಿಸಿರುವವರು ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಜಿಲ್ಲಾಧಿಕಾರಿ ಕಚೇರಿ ಕಂಟ್ರೋಲ್ ರೂಂಗೆ 0821-2423800ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್ ಮನವಿ ಮಾಡಿದ್ದಾರೆ.