"ವರದಿಗೆ ಮುನ್ನವೇ ಎಸ್ ಡಿಪಿಐ ಬಗ್ಗೆ ರಾಜಕೀಯ ಪ್ರೇರಿತ ಹೇಳಿಕೆ ಏಕೆ?"; ಅಬ್ದುಲ್ ಮಜೀದ್
ಮೈಸೂರು, ನವೆಂಬರ್ 20: ಶಾಸಕ ತನ್ವೀರ್ ಸೇಠ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಎಸ್‌ಡಿಪಿಐ ಸಂಘಟನೆ ಹೆಸರು ಬಳಸಿರುವುದು ರಾಜಕೀಯ ಪ್ರೇರಿತ ಎಂದಿದ್ದಾರೆ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ. ಯಾರೇ ಈ ಕೃತ್ಯ ಎಸಗಿದ್ದರೂ ಅದು ಅಕ್ಷಮ್ಯ ಅಪರಾಧ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ, ಕೋರ್ಟ್‌ಗೆ ವರದಿ ನೀಡುತ್ತಾರೆ. ಆದರೆ ಅದಕ್ಕೂ ಮೊದಲೇ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ" ಎಂದರು.
"ರಾಜಕೀಯ ದುರುದ್ದೇಶದಿಂದ ನಮ್ಮ ಪಕ್ಷದ ವಿರುದ್ಧ ಕೆಲವರು ಷಡ್ಯಂತರ ಮಾಡುತ್ತಿದ್ದಾರೆ. ಒಂದು ವೇಳೆ ಈ ಪ್ರಕರಣದಲ್ಲಿ ನಮ್ಮ ಸಂಘಟನೆ ಕೈವಾಡ ಇದೆ ಎಂಬುದು ಸಾಬೀತಾದರೆ ರಾಜಕೀಯಕ್ಕೆ ರಾಜೀನಾಮೆ ಕೊಡುತ್ತೇನೆ. ತನ್ವೀರ್ ಸೇಠ್ ಮೇಲೆ ಹಲ್ಲೆ ನಡೆಸಿರುವ ಆರೋಪಿ ಫರ್ಹಾನ್ ಪಾಷ ಎಸ್ ಡಿಪಿಐ ಕಾರ್ಯಕರ್ತನಲ್ಲ. ಆತ ಚುನಾವಣೆ ಸಂದರ್ಭ ನಮ್ಮ ಪಕ್ಷಕ್ಕೆ ಕೆಲಸ ಮಾಡಿದ್ದಾನೆ. ಕೇವಲ ಎಸ್ ಡಿಪಿಐ ಮಾತ್ರವಲ್ಲದೇ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಲ್ಲೂ ಕೆಲಸ ಮಾಡಿದ್ದಾನೆ. ಚುನಾವಣೆ ಸಂದರ್ಭದಲ್ಲಿ ಯುವಕರ ಗುಂಪು ನಮ್ಮ ಜತೆ ಕೆಲಸ ಮಾಡೋದು ಸಹಜ. ತನ್ವೀರ್ ಸೇಠ್ ಹಾಗೂ ನಾನು ರಾಜಕೀಯದಲ್ಲಿ ಮಾತ್ರ ಎದುರಾಳಿಗಳು. ಇದರ ಹೊರತು ನಮ್ಮಿಬ್ಬರ ನಡುವೆ ಯಾವುದೇ ದ್ವೇಷವಿಲ್ಲ" ಎಂದು ಹೇಳಿದರು.

ಬಿಜೆಪಿ ಬ್ಯಾನ್ ಮಾಡಿ?: ಎಸ್ ಡಿಪಿಐ ದೇಶದ 15 ರಾಜ್ಯದಲ್ಲಿರುವ ರಾಜಕೀಯ ಪಕ್ಷ. ಒಂದೊಮ್ಮೆ ಯಾವುದೇ ರಾಜಕೀಯ ಪಕ್ಷವನ್ನು ಬ್ಯಾನ್ ಮಾಡಬೇಕಾದಲ್ಲಿ, ಮೊದಲು ಬಿಜೆಪಿ ಬ್ಯಾನ್ ಮಾಡಿ. ಬಿಜೆಪಿ ಈ ಹಿಂದಿನಿಂದಲೂ ಹಿಂಸಾತ್ಮಕ ರಾಜಕಾರಣ ಮಾಡಿಕೊಂಡು ದೇಶದಲ್ಲಿ ಅಧಿಕಾರಕ್ಕೆ ಬಂದಿದೆ. ದೆಹಲಿ, ಮುಂಬೈ, ಗುಜರಾತ್ ಹಿಂಸಾ ರಾಜಕೀಯ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದು ಕಿಡಿಕಾರಿದ ಅವರು, ಪ್ರಕರಣದಲ್ಲಿ ಎಸ್ ಡಿಪಿಐ ಸಂಘಟನೆ ಪಾತ್ರ ಇರುವುದು ಸಾಬೀತಾದರೆ, ಸಂಘಟನೆ ಬ್ಯಾನ್ ಮಾಡುವುದಾಗಿ ಗೃಹ ಸಚಿವರು ಹೇಳಿದ್ದಾರೆ. ಆದರೆ ಇಂತಹ ಹೇಳಿಕೆ ಕೊಡಲು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಯಾರು? ಎಂದು ಪ್ರಶ್ನಿಸಿದರು.












Click it and Unblock the Notifications