ಮೈಸೂರಿನಲ್ಲಿ ಮಳೆಗೆ ಶಿಥಿಲಾವಸ್ಥೆಯಲ್ಲಿದ್ದ ಮನೆ ಕುಸಿತ
ಮೈಸೂರು, ಜುಲೈ 25: ಮೈಸೂರಿನಲ್ಲಿ ಮಳೆಯಿಂದಾಗಿ ಶಿಥಿಲಗೊಂಡಿದ್ದ ಹೆಂಚಿನ ಮನೆಯೊಂದು ಕುಸಿದುಬಿದ್ದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮೈಸೂರು ಪಾಲಿಕೆಯ ವ್ಯಾಪ್ತಿಯ ಗಾಯತ್ರಿಪುರಂನಲ್ಲಿ ಈ ಅವಘಡ ಸಂಭವಿಸಿದೆ. ಗಾಯತ್ರಿಪುರಂನ ನಿವಾಸಿ ತಿಮ್ಮಯ್ಯ ಎಂಬುವರ ನಾಡ ಹೆಂಚಿನ ಮನೆಯು ಗುರುವಾರ ಬೆಳಗಿನ ಜಾವ 4 ಗಂಟೆ ವೇಳೆಯಲ್ಲಿ ಸಂಪೂರ್ಣ ಕುಸಿದು ಬಿದ್ದಿದೆ.
ತಿಮ್ಮಯ್ಯ ರವರು ಮಕ್ಕಳು ಮೊಮ್ಮಕ್ಕಳೊಂದಿಗೆ ವಾಸವಿದ್ದಾರೆ. ಬೆಳಗಿನ ಜಾವ ನಾಲ್ಕು ಗಂಟೆಯ ಸುಮಾರಿಗೆ ಶಬ್ದವಾದಾಗ ಎಲ್ಲರೂ ಮನೆಯಿಂದ ಹೊರಗೆ ಒಡಿ ಬಂದಿದ್ದಾರೆ. ಬಳಿಕ ಮನೆ ಇದ್ದಕ್ಕಿದ್ದಂತೆ ಸಂಪೂರ್ಣ ನೆಲಕಚ್ಚಿದೆ. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿರುವುದು ಬಿಟ್ಟರೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇದ್ದ ಒಂದು ಮನೆಯೂ ಕುಸಿದು ಬಿದ್ದಿರುವುದಕ್ಕೆ ತಿಮ್ಮಯ್ಯ ಅವರ ಕುಟುಂಬ ಕಂಗಾಲಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಸ್ಥಳೀಯ ಪಾಲಿಕೆ ಸದಸ್ಯರಾದ ಜಿ.ಎಸ್.ಸತ್ಯರಾಜು ಅವರು, ಮನೆಯವರಿಂದ ಮಾಹಿತಿ ಪಡೆದು, ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸೂಚನೆ ನೀಡಿದರು.












Click it and Unblock the Notifications