'ಭಯ ಸ್ವಭಾವದ ಹಾವಿಗೆ ಹೆದರಿ ಆಘಾತದಿಂದ ಸಾಯುವವರೇ ಹೆಚ್ಚು'
ಮೈಸೂರು, ಜುಲೈ 16 : "ಹಾವು ಕಡಿದರೆ ನೂರರಲ್ಲಿ ಶೇಕಡಾ ಎಂಬತ್ತು ಮಂದಿಗೆ ಭಯ ಮತ್ತು ಆಘಾತಕ್ಕೆ ಒಳಗಾಗಿ ಸಾಯುತ್ತಾರೆ. ಆದರೆ ಹಾವು ಸ್ವಭಾವತಃ ಭಯಪಡುವ ಸರೀಸೃಪ. ಜನರ ಕಣ್ಣಿಗೆ ಬೀಳುವುದು ಅಪರೂಪ. ಇತ್ತೀಚೆಗೆ ಹಾವಿನ ಸಂತತಿ ಕಡಿಮೆಯಾಗುತ್ತಿದ್ದು, ಅವುಗಳನ್ನು ರಕ್ಷಿಸಬೇಕಿದೆ. ಕೆಲವು ಹಾವುಗಳು ಮಾತ್ರ ವಿಷಕಾರಿ. ಹಾವಿನ ಬಗ್ಗೆ ಅರಿವಿಲ್ಲದೇ ಅಪಾಯಕಾರಿ ಎಂದೆನಿಸಿದೆ"
-ಹೀಗೆ ಮಾತಿಗೆ ಆರಂಭಿಸಿದರು ಉರಗತಜ್ಞ ರಮೇಶ್. ಜುಲೈ 16ರಂದು ವಿಶ್ವ ಹಾವಿನ ದಿನ. ಆ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಹಾವಿನ ವಿಷವೂ ಔಷಧಿಗೆ ಬಳಕೆಯಾಗುತ್ತದೆ ಎಂಬ ಸತ್ಯವನ್ನು ಅರಿಯಬೇಕು. ಅಲ್ಲದೇ ನಮಗೆ ಸೂಕ್ತ ಸೌಲಭ್ಯವನ್ನು ಸರಕಾರ ನೀಡಬೇಕು ಎನ್ನುತ್ತಾರೆ ರಮೇಶ್.
ಹಾವು ಹಿಡಿಯುವವರಿಗೇನೂ ಶ್ಲಾಘನೆ, ಸನ್ಮಾನ ಎಲ್ಲವೂ ನಡೆಯುತ್ತದೆ. ಆದರೆ ಅವರ ನಿತ್ಯದ ಸಂಕಟ ಮಾತ್ರ ಹೇಳತೀರದ ಪರಿಸ್ಥಿತಿ. ನಮ್ಮ ನಡುವೆ ಎಲ್ಲೇ ಹಾವು ಕಂಡುಬಂದರೂ ಒಂದು ಕರೆ ಮಾಡಿದರೆ ಸಾಕು, ಇವರು ಅಲ್ಲಿ ಹಾವು ಹಿಡಿಯುವವರು ಪ್ರತ್ಯಕ್ಷರಾಗುತ್ತಾರೆ.

ಅವರೇ ವಿಷಕಾರಿ ಹಾವುಗಳನ್ನು ಹಿಡಿದು ಅರಣ್ಯದಲ್ಲಿ ಬಿಟ್ಟು ಬರುತ್ತಾರೆ. ಅನೇಕ ಕಡೆಯಲ್ಲಿ ಹಾವು ಹಿಡಿಯುವವರಿಗೆ ಸರಕಾರದಿಂದ ಮಾಸಿಕ ಗೌರವಧನ ಸಿಗುತ್ತದೆ. ಆದರೆ ಅದೇ ಗೌರವಧನವನ್ನು ತೆಗೆದುಕೊಳ್ಳಲು ಅನೇಕರ ಕೈ- ಕಾಲು ಹಿಡಿಯಬೇಕಾದ ಪರಿಸ್ಥಿತಿ ಬಂದಿದೆ ಎಂಬುದು ಅನೇಕರ ಅನುಭವದ ಮಾತು.
"ಹಾವು ಕಾಣಿಸಿದ ಯಾವ ಸಮಯದಲ್ಲೂ ಒಂದು ಕರೆ ಮಾಡಿದರೆ ಸಾಕು, ಅಲ್ಲಿಗೆ ಬಂದು ಹಾವು ಹಿಡಿಯುತ್ತೇವೆ. ಅವುಗಳನ್ನು ಅಲ್ಲಿಂದ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬರುತ್ತೇವೆ. ಮನೆಯವರು ಕೊಟ್ಟಷ್ಟು ಹಣ ತೆಗೆದುಕೊಂಡು ಬರುತ್ತೇವೆ. ಹಾವು ಕಾಣಿಸಿದ ತಕ್ಷಣ ಅದನ್ನು ಕೊಲ್ಲುವುದು ಬಿಟ್ಟು, ನಮ್ಮನ್ನು ಸಂಪರ್ಕಿಸಿದರೆ ಹಾವಿನ ಜೀವ ಉಳಿಯುತ್ತದೆ. ಹಾವು ವಿಷ ಜಂತುವಾದರೂ ಪರಿಸರ ಸಮತೋಲನಕ್ಕೆ ಇದು ಸಹಕಾರಿಯಾಗಿದೆ" ಎನ್ನುತ್ತಾರೆ ಉರಗ ತಜ್ಞ ಸ್ನೇಕ್ ಶ್ಯಾಮ್.

ಹಾವುಗಳು ನಿರುಪದ್ರವಿಗಳು. ಆದರೆ ತಂಟೆಗೆ ಬಂದರೆ ಮಾತ್ರ ಅವು ಸುಮ್ಮನಿರುವುದಿಲ್ಲ. ಹೀಗಾಗಿ ಹಾವುಗಳನ್ನು ಕೊಲ್ಲದೆ ಉಳಿಸುವ ಕೆಲಸ ಮಾಡಬೇಕು. ಕಾಡಿನಿಂದ ಆಹಾರ ಅರಸಿ ನಾಡಿಗೆ ಬರುತ್ತವೆ. ಕಪ್ಪೆ, ಮೊಲ ಇನ್ನಿತರ ಪ್ರಾಣಿಗಳೇ ಅದಕ್ಕೆ ಆಹಾರ. ಹೀಗಾಗಿ ಯಾರೂ ಹಾವುಗಳನ್ನು ಕೊಲ್ಲುವ ಪ್ರಯತ್ನ ಮಾಡಬೇಡಿ ಎನ್ನುತ್ತಾರೆ ಅವರು.
ಹಾವು ಹಿಡಿಯುವವರಿಗೆ ಒಂದು ವಾಹನ ಕೊಡುವ ಜತೆಗೆ ಗುರುತಿನ ಚೀಟಿಯನ್ನು ಬಿಬಿಎಂಪಿ ಕೊಟ್ಟಿದೆ. ಅಪಾಯಕಾರಿ ಸ್ಥಳ ಅಥವಾ ವಿಷಕಾರಿ ಹಾವು ಹಿಡಿಯಲು ಸೂಕ್ತ ತರಬೇತಿ ಸಹ ಅವರಿಗೆ ನೀಡಲಾಗುತ್ತದೆ. ಅಲ್ಲದೇ ವೈದ್ಯಕೀಯ ಸಲಹೆ- ಮಾರ್ಗದರ್ಶಗಳನ್ನೂ ನೀಡಲಾಗುತ್ತದೆ.

ಆದರೆ, ಅದು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾದಂತಿದೆ. ಅದನ್ನು ಹೊರತುಪಡಿಸಿ ಅನೇಕ ಜಿಲ್ಲೆ, ಗ್ರಾಮಾಂತರ ಭಾಗದ ಹಾವು ಹಿಡಿಯುವವರಿಗೆ ಈ ಸೌಲಭ್ಯ ಮರೀಚಿಕೆ ಸರಿ. ಇನ್ನಾದರೂ ಸರಕಾರವು ಉರಗ ತಜ್ಞರ ಅವಶ್ಯಕತೆಗಳನ್ನು ಪೂರೈಸಬೇಕಿದೆ.












Click it and Unblock the Notifications