Breaking; ನಂಜನಗೂಡು, 2.40 ಕೋಟಿ ಹುಂಡಿ ಹಣ ಸಂಗ್ರಹ
ಮೈಸೂರು, ಮೇ 07; ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ನಂಜನಗೂಡಿನ ಶ್ರೀಕಂಠೇಶ್ವನ ಹುಂಡಿಯಲ್ಲಿ 2.40 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ 45 ಲಕ್ಷ ರೂ. ಅಧಿಕ ಸಂಗ್ರಹವಾಗಿದೆ.
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಹುಂಡಿ ಎಣಿಕೆ ನಡೆದಿದೆ. ನಿಷೇಧಿತ ನೋಟುಗಳು ಸಹ ಹುಂಡಿಯಲ್ಲಿ ಪತ್ತೆಯಾಗಿವೆ. 20ಕ್ಕೂ ಅಧಿಕ ಹುಂಡಿಗಳಿಂದ ಸಂಗ್ರಹವಾದ ಮೊತ್ತ 2,49,07,052 ರೂ.ಗಳು.
ಈ ಬಾರಿಯ ನಂಜನಗೂಡು ದೊಡ್ಡ ಜಾತ್ರೆಗೆ ಕೋವಿಡ್ ಸೇರಿದಂತೆ ಯಾವುದೇ ಅಡ್ಡಿ ಇರಲಿಲ್ಲ. ಆದ ಕಾರಣ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಆದ್ದರಿಂದ ಹುಂಡಿ ಕಾಣಿಕೆ ಹೆಚ್ಚಾಗಿ ಸಲ್ಲಿಕೆಯಾಗಿದೆ.

ಹುಂಡಿಯಲ್ಲಿ ಹಣದ ಜೊತೆಗೆ 222 ಗ್ರಾಂ ಚಿನ್ನ, 6 ಕೆಜಿ ಬೆಳ್ಳಿ ಸಹ ಸಂಗ್ರಹವಾಗಿದೆ. 111 ವಿದೇಶಿ ಕರೆನ್ಸಿಗಳು, ರದ್ದಾಗಿರುವ 500 ಮತ್ತು 1000 ರೂ. ನೋಟುಗಳು ಸಹ ಹುಂಡಿಯಲ್ಲಿ ಪತ್ತೆಯಾಗಿವೆ.
ಸುಮಾರು 40ಕ್ಕೂ ಅಧಿಕ ಸಿಬ್ಬಂದಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಲ್ಲಿ ಹುಂಡಿ ಹಣವನ್ನು ಎಣಿಕೆ ಮಾಡಿದ್ದಾರೆ. ಕಳೆದ ಬಾರಿಯೂ ಸಹ ಹುಂಡಿಯಲ್ಲಿ ನಿಷೇಧಿತ ನೋಟುಗಳು ಪತ್ತೆಯಾಗಿದ್ದವು.
ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಕಾರಣದಿಂದಾಗಿ ನಂಜನಗೂಡಿನ ದೊಡ್ಡ ರಥೋತ್ಸವ ನಡೆದಿರಲಿಲ್ಲ. ನಂಜನಗೂಡಿನ ಪಂಚರಥೋತ್ಸವದ ಸಂದರ್ಭ ಗಣಪತಿ, ಶ್ರೀಕಂಠೇಶ್ವರ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ಹಾಗೂ ಗೌತಮ ರಥಗಳನ್ನು ಎಳೆಯಲಾಗುತ್ತದೆ.
ಈ ಐದು ರಥಗಳ ಪೈಕಿ ಗೌತಮ ರಥ ಮುಖ್ಯವಾಗಿದ್ದು, ಪಂಚ ರಥೋತ್ಸವದ ಪ್ರಮುಖ ಆಕರ್ಷಣೆ. ಈ ರಥವು ಸುಮಾರು 205 ಟನ್ ತೂಕ, 90 ಅಡಿ ಎತ್ತರವನ್ನು ಹೊಂದಿದೆ.












Click it and Unblock the Notifications