ಮೈಸೂರಿನಲ್ಲಿ 6 ವರ್ಷದ ಹಿಂದೆಯೂ ನಡೆದಿತ್ತು ಇಂಥದ್ದೇ ವಂಚನೆ
ಮೈಸೂರು, ಜೂನ್ 14 : ಐಎಂಎ ವಂಚನೆಯ ಬಳಿಕ ಮೈಸೂರು ಮೂಲದ ನಿಷ್ಕಾ ಗ್ರೂಪ್ ಆಫ್ ಕಂಪೆನೀಸ್ ನಿಂದ ವಂಚನೆಗೊಳಗಾದ ಪ್ರಕರಣವೂ ಬೆಳಕಿಗೆ ಬಂದಿದೆ. ಆ ಹಣವನ್ನು ವಾಪಸ್ ಪಡೆಯಲು ಕಳೆದ ಆರು ವರ್ಷಗಳಿಂದ ಮೋಸ ಹೋದವರು ಅಲೆದಾಡುತ್ತಿದ್ದಾರೆ. ಕಂಪನಿಯ ಮಾಲೀಕ ಟಿ ನರಸೀಪುರ ತಾಲ್ಲೂಕಿನ ಗರ್ಗೇಶ್ವರಿ ಮೂಲದ ಫಣಿರಾಜೇಗೌಡ ಎಂಬಾತ ಮೈಸೂರು ಜಿಲ್ಲೆಯ ನೂರಾರು ಮಂದಿಗೆ ಸುಮಾರು 25 ಕೋಟಿ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿದ್ದಾನೆ.ಆತ ಇನ್ನೂ ಪತ್ತೆಯಾಗಿಲ್ಲ.
2010ರಲ್ಲಿ ನಗರದ ಸಿದ್ಧಾರ್ಥ ಬಡಾವಣೆಯಲ್ಲಿ ನಿಷ್ಕಾ ಗ್ರೂಪ್ ಕಂಪನಿ ಆರಂಭವಾಯಿತು. ಹೆಚ್ಚಿನ ಬಡ್ಡಿಯ ಆಮಿಷ ಒಡ್ಡಿ ಜನರನ್ನು ಆಕರ್ಷಿಸಲಾಯಿತು. ಸಾಕಷ್ಟು ಜನ ಹೂಡಿಕೆ ಮಾಡಿದರು. ಕಂಪನಿ ಪ್ರಚಾರ ಹಾಗೂ ಹಣ ಸಂಗ್ರಹಕ್ಕೆಂದು ರಾಜ್ಯಾದ್ಯಂತ 13 ಸಾವಿರ ಏಜೆಂಟರನ್ನು ನೇಮಕ ಮಾಡಲಾಗಿತ್ತು. ಅದರಂತೆ ಎರಡು ವರ್ಷದ ಅವಧಿಯಲ್ಲಿ ಕಂಪನಿಗೆ ನೂರಾರು ಕೋಟಿ ಹಣ ಹರಿದುಬಂತು. ಸರ್ಕಾರಿ ಹಾಗೂ ಖಾಸಗಿ ಕಂಪನಿಯಿಂದ ನಿವೃತ್ತರಾದವರು ಹಣ ಹೂಡಿದರು. ಆರಂಭದಲ್ಲಿ ಹಣ ಹೂಡಿದವರಿಗೆ ಪ್ರತಿ ತಿಂಗಳ ಬಡ್ಡಿಯನ್ನು ನೀಡಲಾಗುತ್ತಿತ್ತು. ಇದರಿಂದ ಪ್ರೇರೇಪಿತರಾದ ಮತ್ತಷ್ಟು ಮಂದಿ ಹಣ ಹೂಡಿಕೆಗೆ ಮುಂದಾದರು. ಹೀಗೆ ಮೈಸೂರಿನಲ್ಲೇ 25 ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹವಾಗಿತ್ತು.
ಹೆಚ್ಚು ಹೆಚ್ಚು ಹಣ ಸಂಗ್ರಹವಾಗುತ್ತಿದ್ದಂತೆ ಫಣಿರಾಜೇಗೌಡ, ಆತನ ತಂಡ, ಮತ್ತಷ್ಟು ಹಣ ಮಾಡುವ ಉದ್ದೇಶದಿಂದ ವಿವಿಧ ಹೆಸರಿನ ಕಂಪನಿಯನ್ನು ಆರಂಭಿಸಿದರು. ಹೀಗಾಗಿ ರಾಜ್ಯಾದ್ಯಂತ ಸಾವಿರಾರು ಮಂದಿ 120 ಕೋಟಿ ರೂಪಾಯಿಗೂ ಹೆಚ್ಚು ಹಣ ಹೂಡಿಕೆ ಮಾಡಿದರು.

2013ರ ಹೊತ್ತಿಗೆ ಆತನ ಬಂಡವಾಳ ಬಯಲಾಗತೊಡಗಿದೆ. ಹಣ ಹೂಡಿಕೆ ಮಾಡಿದವರಿಗೆ ಬಡ್ಡಿ ಇರಲಿ, ಅಸಲು ಹಣವನ್ನೂ ಕೊಡುತ್ತಿರಲಿಲ್ಲ. ಹೀಗಾಗಿ ಹೂಡಿಕೆದಾರರು ರಸ್ತೆಗಿಳಿದು ಪ್ರತಿಭಟಿಸಿದರು. ವಿವಿಧ ಠಾಣೆಗಳಲ್ಲಿ ದೂರು ಕೂಡ ದಾಖಲಾಗಿತ್ತು. ಆತ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಸುಮಾರು 30 ಕೋಟಿ ರೂ ಮೊತ್ತವನ್ನು ಠೇವಣಿದಾರರಿಗೆ ಹಿಂದಿರುಗಿಸಿದ ಅಷ್ಟೆ.
ಜನರ ಒತ್ತಡ ಹೆಚ್ಚಾಗುತ್ತಿದ್ದಂತೆಯೇ ಆತ ತಲೆಮರೆಸಿಕೊಂಡ. ನ್ಯಾಯಾಲಯದಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಆದರೆ ಆತ ಇದುವರೆಗೂ ಪತ್ತೆಯಾಗಿಲ್ಲ.












Click it and Unblock the Notifications