ನಟಿ ಜಿಯಾ ಖಾನ್ ಸಾವಿನ ಅಸಲಿ ರಹಸ್ಯ ಬಹಿರಂಗ
ಮುಂಬೈ, ಡಿ. 10: ಬಾಲಿವುಡ್ ನಟಿ ಜಿಯಾ ಖಾನ್ ಅವರ ನಿಗೂಢ ಸಾವು ಪ್ರಕರಣದ ತನಿಖೆಯನ್ನು ವಹಿಸಿಕೊಂಡಿರುವ ಸಿಬಿಐ ತನ್ನ ತನಿಖೆಯನ್ನು ತೀವ್ರಗೊಳಿಸಿದೆ. ಪ್ರಮುಖ ಆರೋಪಿ ನಟ ಸೂರಜ್ ಪಂಚೋಲಿ ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ, ಜಿಯಾ ಮೇಲೆ ಒತ್ತಡ ಹೇರಿ ಆಕೆ ಆತ್ಮಹತ್ಯೆಗೆ ಕಾರಣನಾಗಿದ್ದಾನೆ ಎಂದು ಸಿಬಿಐ ವಿಚಾರಣೆಯಿಂದ ತಿಳಿದು ಬಂದಿದೆ. ಜೊತೆ ಜಿಯಾ ಸಾವಿನ ಕಾರಣವೂ ಸ್ಪಷ್ಟವಾಗಿದೆ.
ಪಾಂಚೋಲಿ ದಂಪತಿಯ ಪುತ್ರ ಸೂರಜ್ ನಟಿ ಜಿಯಾ ಖಾನ್ ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದ ಆರೋಪವನ್ನು ಎದುರಿಸುತ್ತಿದ್ದಾನೆ. ಜಿಯಾ ಅವರ ತಾಯಿ ರಬಿಯಾ ಖಾನ್ ಅವರ ಕೋರಿಕೆಯ ಮೇರೆಗೆ ಈ ಪ್ರಕರಣದ ತನಿಖೆಯನ್ನು ಬಾಂಬೆ ಹೈಕೋರ್ಟ್ ಮುಂಬೈ ಪೊಲೀಸರಿಂದ ಸಿಬಿಐ ವಶಕ್ಕೆ ನೀಡಿತ್ತು. ವಿಳಂಬವಾದರೂ ಸಿಬಿಐ ತನ್ನ ತನಿಖೆ ಕೊನೆಗೂ ಮುಂದುವರೆಸುತ್ತಿದೆ.[ಜಿಯಾ ಅಮ್ಮನ ಮೇಲೆ 100 ಕೋಟಿ ಕೇಸ್]
ಬ್ರಿಟಿಷ್-ಅಮೆರಿಕನ್ ನಟಿ ಜಿಯಾ ಜುಹು ಅಪಾರ್ಟ್ಮೆಂಟ್ ನಲ್ಲಿ ಕಳೆದ ವರ್ಷ ಜೂ.3ರಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ 6 ಪುಟಗಳ ಡೆಟ್ ನೋಟ್ ಬರೆದಿದ್ದರು. ಸೂರಜ್ ಹಾಗೂ ತನ್ನ ನಡುವಿನ ಸಂಬಂಧವನ್ನು ತಿಳಿಸಿದ್ದರು. ಡೆತ್ ನೋಟ್ ಆಧಾರದ ಮೇಲೆ ಕಳೆದ ವರ್ಷ ಜೂನ್ 10 ರಂದು ಸೂರಜ್‌ನನ್ನು ಮುಂಬೈ ಪೊಲೀಸರು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.

ಜಿಯಾ ಸಾವಿನ ಕಾರಣವೇನು?
ನಿರಂತರವಾಗಿ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಂಡಿದ್ದಾರೆ. ಇದರಿಂದ ಮನನೊಂದಿದ್ದರು. ಪ್ರೇಮ ವೈಫಲ್ಯದಿಂದ ಬಳಲುವುದಕ್ಕೂ ಮುನ್ನ ಆಕೆ ನಾಲ್ಕು ವಾರಗಳ ಗರ್ಭಿಣಿಯಾಗಿದ್ದರು. ಈ ವಿಷಯವನ್ನು ಪಂಚೋಲಿ ಫ್ಯಾಮಿಲಿ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗರ್ಭವನ್ನು ತೆಗೆಸುವಂತೆ ಒತ್ತಾಯಿಸಿದರು.ಒತ್ತಾಯದಿಂದ ತುರ್ತಾಗಿ ವೈದ್ಯಕೀಯ ನೆರವು ಬಯಸಿದ ಜಿಯಾಗೆ ಸೂರಜ್ ಆಸರೆ ಸಿಗಲಿಲ್ಲ.

ಸೂರಜ್ ವಿಳಂಬ ಮಾಡಿದ್ದು ಮಾರಕವಾಯಿತು
ಒತ್ತಾಯಕ್ಕೆ ಮಣಿದು ಪ್ರಸೂತಿ ತಜ್ಞರನ್ನು ಸಂಪರ್ಕಿಸಿದ ಜಿಯಾಗೆ ಕೊಟ್ಟ ಮಾತ್ರೆಗಳು ಕೆಲಸಕ್ಕೆ ಬರಲಿಲ್ಲ. ಮತ್ತೊಂದೆಡೆ ವೈದ್ಯರನ್ನು ಕಂಡು ಮಾತ್ರೆಗಳನ್ನು ತೆಗೆದುಕೊಂಡ ಜಿಯಾ ತನ್ನ ಸಾವಿಗೆ ಮುನ್ನಡಿ ಬರೆದಿದ್ದಳು. ಈ ಸಮಯದಲ್ಲಿ ಸೂರಜ್ ನೆರವು ಕೋರಿದ್ದಾಳೆ. ಅದರೆ, ಸೂರಜ್ ವಿಳಂಬ ಮಾಡಿ, ತಜ್ಞ ವೈದ್ಯರನ್ನು ಕರೆ ತರುವುದಾಗಿ ಹೇಳಿದ್ದಾನೆ. ಅದರೆ, ಅಷ್ಟರಲ್ಲಿ ಗರ್ಭಪಾತವಾಗಿದೆ. ನೋವಿನಿಂದ ಬಳಲುತ್ತಿದ್ದ ಜಿಯಾಳನ್ನು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಿಲ್ಲ

ಆಸ್ಪತ್ರೆ ತನಕ ಸೂರಜ್ ಬರಲಿಲ್ಲ ಏಕೆ?
ಜಿಯಾಖಾನ್ ಗೆ ಗರ್ಭಪಾತವಾಗಿದ್ದು ತಿಳಿದ ಸೂರಜ್ ಆಕೆ ನೆರವಿಗೆ ಧಾವಿಸಿದ್ದಾನೆ. ಅದರೆ, ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಿಲ್ಲ. ತನ್ನ ಭವಿಷ್ಯ, ಸ್ಟಾರ್ ಗಿರಿಗೆ ಮುಳುವಾಗುತ್ತದೆ ಎಂದು ಭಾವಿಸಿದ ಸೂರಜ್ ತಾನೇ ಖುದ್ದು ಗರ್ಭಪಾತ ಕಲ್ಮಶ(foetus) ವನ್ನು ಕ್ಲೀನ್ ಮಾಡಿ ತೆರಳಿದ್ದಾನೆ. ಸೂರಜ್ ನಿಂದ ಹಲವು ಬಾರಿ ಗರ್ಭ ಧರಿಸಿದ್ದೀನಿ ಎಂದು ಜಿಯಾ ಖಾನ್ ಬಹಿರಂಗವಾಗಿ ಹಲವು ಬಾರಿ ಹೇಳಿಕೊಂಡಿದ್ದರು. ಜೊತೆಗೆ ಈ ಬಗ್ಗೆ ಪತ್ರದಲ್ಲೂ ಉಲ್ಲೇಖಿಸಲಾಗಿತ್ತು.

ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾದ ತುಣುಕು ಏನಾಯ್ತು?
ಬಾಲಿವುಡ್ ನಟಿ ಜಿಯಾಖಾನ್ ಸಾವನ್ನಪ್ಪಿ ನಾಲ್ಕು ತಿಂಗಳುಗಳ ನಂತರ ರಬಿಯಾ ಖಾನ್ ಅವರು ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಎನ್ನಲಾದ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿರುವ ವಿಡಿಯೋ ತುಣುಕುಗಳನ್ನು ಬಹಿರಂಗಪಡಿಸಿದ್ದರು. ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡ ರಾತ್ರಿ ಆದಿತ್ಯಾ ಪಂಚೋಲಿ ಅವರು ಸಾಗರ್ ಸಂಗೀತ್ ಅಪಾರ್ಟ್ಮೆಂಟ್ ಗೆ ಬಂದು ಹೋಗಿರುವುದು ಖಚಿತವಾಗಿತ್ತು. ಸಾಕ್ಷಿ ನಾಶ ಎಂದು ಪ್ರಕರಣ ದಾಖಲಿಸಬೇಕು ಎಂದು ರಬಿಯಾ ಕೋರಿಕೊಂಡಿದ್ದರು

ಪತ್ರಗಳ ನಿಗೂಢತೆ ಬಯಲಾಗಲಿಲ್ಲ
ಜಿಯಾ ಬರೆದಿದ್ದಾಳೆ ಎನ್ನಲಾದ ಎರಡು ಪತ್ರಗಳ ಕೈಬರಹದ ಸ್ಯಾಂಪಲ್ ಕೋರ್ಟಿಗೆ ನೀಡಿ ಇದರ ವರದಿ ಆಧಾರದ ಮೇಲೆ ನನ್ನ ಕಕ್ಷಿದಾರ ಮೃತಳಿಗೆ ಹಿಂಸೆ ನೀಡಿದ ದಿನಾಂಕ ಹಾಗೂ ಪತ್ರ ಬರೆದಿರುವ ದಿನಾಂಕ ಪರಿಶೀಲಿಸಿ ಎಂದು ಸೂರಜ್ ವಕೀಲರು ವಾದಿಸಿದ್ದು ಪ್ರಕರಣಕ್ಕೆ ಬೇರೆ ತಿರುವು ನೀಡಿತ್ತು. ರಬಿಯಾ ಅವರ ಸತತ ಪ್ರಯತ್ನದಿಂದ ಕುಂಠಿತಗೊಂಡಿದ್ದ ತನಿಖೆ ಮತ್ತೆ ಆರಂಭವಾದರೂ ಹಲವಾರು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ.












Click it and Unblock the Notifications