ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ಏರಿಕೆ; ಸೋಂಕಿಗೆ ಮೂರನೇ ಬಲಿ
ಮುಂಬೈ, ಆಗಸ್ಟ್ 13: ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ಪ್ರಕರಣ ಹೆಚ್ಚಾಗುವ ಸೂಚನೆ ನೀಡಿದ್ದು, ಡೆಲ್ಟಾ ಪ್ಲಸ್‌ನಿಂದಾಗಿ ಸಾವನ್ನಪ್ಪಿರುವ ಮೂರನೇ ಪ್ರಕರಣ ವರದಿಯಾಗಿದೆ.
69 ವರ್ಷದ ಪತ್ರಕರ್ತರೊಬ್ಬರು ಡೆಲ್ಟಾ ಪ್ಲಸ್ ಸೋಂಕಿನಿಂದಾಗಿ ಮಹಾರಾಷ್ಟ್ರದ ರಾಯಗಢದಲ್ಲಿ ಸಾವನ್ನಪ್ಪಿರುವುದಾಗಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಈ ರೂಪಾಂತರದಿಂದ ಸಾವನ್ನಪ್ಪುತ್ತಿರುವ ಮೂರನೇ ಪ್ರಕರಣ ಇದಾಗಿದೆ. ಈ ಮುನ್ನ 80 ವರ್ಷದ ಹಾಗೂ 63 ವರ್ಷದ ಇಬ್ಬರು ವೃದ್ಧೆಯರು ಸಾವನ್ನಪ್ಪಿದ್ದರು.
ಡೆಲ್ಟಾ ರೂಪಾಂತರದ ಮತ್ತೊಂದು ರೂಪಾಂತರವಾದ ಡೆಲ್ಟಾ ಪ್ಲಸ್ ಮೊದಲು ಕಂಡುಬಂದಿದ್ದು ಮಹಾರಾಷ್ಟ್ರದಲ್ಲಿ. ಕೊರೊನಾ ಎರಡನೇ ಅಲೆ ಸಂದರ್ಭ ಈ ರೂಪಾಂತರ ಪತ್ತೆಯಾಗಿತ್ತು. ಜೂನ್ ತಿಂಗಳಿನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಇದು ಕಾಳಜಿಯ ರೂಪಾಂತರ ಎಂದು ಘೋಷಣೆ ಮಾಡಿತ್ತು.

ಶುಕ್ರವಾರ ಸಾವನ್ನಪ್ಪಿದ ವ್ಯಕ್ತಿಗೂ ಇತರೆ ಆರೋಗ್ಯ ಸಮಸ್ಯೆಗಳಿದ್ದು, ಹದಿನೇಳು ದಿನಗಳಿಂದ ಆಸ್ಪತ್ರೆಯಲ್ಲಿದ್ದರು. ಮೇ ತಿಂಗಳಿನಲ್ಲಿ ಈ ವ್ಯಕ್ತಿಗೆ ಎರಡೂ ಡೋಸ್‌ಗಳ ಲಸಿಕೆಯನ್ನು ನೀಡಲಾಗಿತ್ತು.
ಮಹಾರಾಷ್ಟ್ರದಲ್ಲಿ ಇದುವರೆಗೂ 65 ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿವೆ. ಪ್ರತಿ ಜಿಲ್ಲೆಯೂ ಸೋಂಕಿನ ಜೆನೋಮ್ ಸೀಕ್ವೆನ್ಸ್‌ಗೆ ನೂರು ಮಾದರಿಗಳನ್ನು ಕಳುಹಿಸಲಾಗುತ್ತಿದೆ.
ಸಾವನ್ನಪ್ಪಿದ ವ್ಯಕ್ತಿಯ ಸಂಪರ್ಕಕ್ಕೆ ಬಂದವರನ್ನು ಕೂಡ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆತನ ಕುಟುಂಬದ ನಾಲ್ವರು ಸದಸ್ಯರಿಗೆ ಹಾಗೂ ಇತರ ಐದು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್ ರೂಪಾಂತರ ತಳಿಯ ಹೊಸ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ರಾಜ್ಯದಲ್ಲಿ ಶೇ.80ರಷ್ಟು ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ ಸಂದರ್ಭದಲ್ಲಿ ಡೆಲ್ಟಾ ಪ್ಲಸ್ ತಳಿಯು ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ 13 ಡೆಲ್ಟಾ ಪ್ಲಸ್ ಸೋಂಕಿತ ಪ್ರಕರಣಗಳು ವರದಿ ಮಾಡಿರುವ ಜಲಗೋನ್ ಜಿಲ್ಲೆಯು ಅತಿಹೆಚ್ಚು ಪ್ರಕರಣಗಳನ್ನು ಹೊಂದಿರುವ ಮೊದಲ ಜಿಲ್ಲೆಯಾಗಿದೆ. ಎರಡನೇ ಸ್ಥಾನದಲ್ಲಿರುವ ರತ್ನಗಿರಿ ಜಿಲ್ಲೆಯಲ್ಲಿ 11, ಮುಂಬೈನಲ್ಲಿ 6, ಥಾಣೆ 5 ಮತ್ತು ಪುಣೆಯಲ್ಲಿ 3 ಹೊಸ ಕೊವಿಡ್-19 ಸೋಂಕಿತ ಪ್ರಕರಣಗಳು ವರದಿ ಮಾಡಿವೆ.
ಕೊರೊನಾ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಮತ್ತು ಮೂರನೇ ಅಲೆಯ ಭೀತಿ ಹಿನ್ನೆಲೆ ಕೆಲವು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಪುಣೆ, ಅಹ್ಮದನಗರ್, ಸೋಲಾಪುರ್, ಸಾಂಗ್ಲಿ, ಸತಾರಾ, ಸಿಂಧುದರ್ಗ್ ಮತ್ತು ರತ್ನಗಿರಿ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಜಿಲ್ಲೆಗಳಲ್ಲೇ ಹೊಸ ಸೋಂಕಿತ ಪ್ರಕರಣಗಳ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂಬುದು ಅಂಕಿ-ಅಂಶಗಳಿಂದ ಸ್ಪಷ್ಟವಾಗಿ ತಿಳಿದು ಬಂದಿದೆ.
ಕೊರೊನಾವೈರಸ್ ರೋಗಾಣುಗಳು ರೂಪಾಂತರಗೊಳ್ಳುತ್ತಿವೆ. ಡೆಲ್ಟಾ ವೈರಸ್ ಶರವೇಗದಲ್ಲಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಮುಂಬೈನಲ್ಲಿ ರೋಗಾಣುವಿನ ಡಿಎನ್ಎ ಪರೀಕ್ಷೆ ನಡೆಸುವಂತಾ ಪ್ರಯೋಗಾಲಯಗಳನ್ನು ಆರಂಭಿಸಲಾಗುವುದು ಎಂದು ಸಿಎಂ ಠಾಕ್ರೆ ತಿಳಿಸಿದ್ದಾರೆ.
ಕೋವಿಡ್‌ನ ಡೆಲ್ಟಾ ಪ್ಲಸ್ ರೂಪಾಂತರಕ್ಕೆ ತಮಿಳುನಾಡಿನಲ್ಲಿ ಮೊದಲ ಬಲಿಯಾಗಿತ್ತು. ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿರುವ ಜಿಲ್ಲೆಗಳಲ್ಲಿ ತಕ್ಷಣವೇ ಕೊರೊನಾ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವಂತೆ ಶುಕ್ರವಾರ ಕೇಂದ್ರ ಆರೋಗ್ಯ ಸಚಿವಾಲಯ ಏಳು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿತ್ತು. ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್, ಪಂಜಾಬ್, ಹರಿಯಾಣ ಹಾಗೂ ಜಮ್ಮು ಕಾಶ್ಮೀರ ರಾಜ್ಯಗಳಲ್ಲಿ ಡೆಲ್ಟಾ ಪ್ಲಸ್ ಪ್ರಕರಣಗಳು ಕಂಡುಬಂದಿದ್ದವು.
"INSACOG ಡೆಲ್ಟಾ ಪ್ಲಸ್ ರೂಪಾಂತರದ ಬಗ್ಗೆ ಮೂರು ಮುಖ್ಯ ಸಂಗತಿಗಳನ್ನು ತಿಳಿಸಿದೆ. ಮೊದಲನೆಯದು, ಇದು ವೇಗವಾಗಿ ಹರಡಬಲ್ಲದು. ಎರಡನೆಯದು, ಶ್ವಾಸಕೋಶಗಳ ಮೇಲೆ ಪರಿಣಾಮ ಬೀರಬಲ್ಲದು. ಕೊನೆಯದಾಗಿ ಮೋನೊಕ್ಲೊನಾಲ್ ಪ್ರತಿಕಾಯ ಪ್ರತಿಕ್ರಿಯೆಗೆ ಕಡಿಮೆ ಸ್ಪಂದನೆ ಎಂಬುದು" ಎಂದು ರಾಜೇಶ್ ಭೂಷಣ್ ತಿಳಿಸಿದ್ದಾರೆ.
ಅತಿ ಹೆಚ್ಚು ಪರೀಕ್ಷೆಗಳನ್ನು ನಡೆಸಬೇಕು. ಆದ್ಯತೆ ಮೇರೆಗೆ ಲಸಿಕೆಗಳನ್ನು ತ್ವರಿತಗತಿಯಲ್ಲಿ ನೀಡಬೇಕು, ಸೋಂಕಿತರ ಪತ್ತೆ ಕಾರ್ಯ ನಡೆಯಬೇಕು ಎಂದು ಸೂಚನೆ ನೀಡಿದ್ದು, ಸೋಂಕಿನ ಪ್ರಕರಣ ಕಂಡುಬಂದಿರುವ ಜಿಲ್ಲೆ ಅಥವಾ ಪ್ರದೇಶದಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ತಿಳಿಸಿದ್ದಾರೆ.












Click it and Unblock the Notifications