ಬಸ್ಸಿಗೆ ಕಾಯುತ್ತಿದ್ದವರ ಮೇಲೆ ಹರಿದ ಕಾರು: ನಾಲ್ವರ ದುರ್ಮರಣ
ಥಾಣೆ, ನವೆಂಬರ್ 17: ಬಸ್ಸಿಗಾಗಿ ಕಾಯುತ್ತಿದ್ದ ಹತ್ತಕ್ಕೂ ಹೆಚ್ಚು ಜನರ ಮೇಲೆ ವೇಗವಾಗಿ ಬರುತ್ತಿದ್ದ ಕಾರೊಂದು ಹರಿದ ಪರಿಣಾಮ ನಾಲ್ಕು ಜನ ಮೃತರಾಗಿದ್ದು, ಐವರು ಗಂಭೀರವಾಗಿ ಗಾಯಗೊಂಡ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಥಾಣೆಯ ಸಹಪುರದ ಕಿಹ್ನವಾಲಿ ಸೇತುವೆ ಬಳಿ ರಸ್ತೆಯ ಪಕ್ಕದಲ್ಲಿ ಹಲವರು ಬಸ್ಸಿಗಾಗಿ ಕಾಯುತ್ತ ನಿಂತಿದ್ದರು. ನಾಸಿಕ್ ಗೆ ಹೊರಟು ನಿಂತಿದ್ದ ಅವರ ಮೇಲೆ ಬೆಳಿಗ್ಗೆ 7 ಗಂಟೆಯ ಸುಮಾರಿಗೆ ಕಾರೊಂದು ಹರಿದ ಪರಿಣಾಮ ಈ ಘಟನೆ ನಡೆದಿದೆ.
ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಆಗಲೇ ನಾಲ್ವರು ಮೃತರಾಗಿದ್ದಾರೆಂದು ವೈದ್ಯರು ಘೋಷಿಸಿದರು.

ಇಂದು ಬೆಳಿಗ್ಗೆಯಷ್ಟೇ ಮುಂಬೈಯಿಂದ ಹಂಪಿಗೆ ಹೊರಟಿದ್ದ ಬಸ್ಸೊಂದು ಅಪಘಾತಕ್ಕೀಡಾದ ಪರಿಣಾಮ ಆರು ಜನ ದುರ್ಮರಣಕ್ಕೀಡಾಗಿದ್ದರು. ಘಟನೆಯಲ್ಲಿ ಆರು ಜನ ಗಾಯಗೊಂಡಿದ್ದರು. ವೇಗವಾಗಿ ಬರುತ್ತಿದ್ದ ಲಾರಿಯೊಂದು ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿತ್ತು.











Click it and Unblock the Notifications