ವಿದ್ಯಾರ್ಥಿಗಳಿಗೆ ನೀಡಬೇಕಾದ ಮಧ್ಯಾಹ್ನದ ಬಿಸಿಯೂಟದಲ್ಲಿ ಕಂಡುಬಂದ ಹಾವು
ನಾಂದೇಡ್ (ಮಹಾರಾಷ್ಟ್ರ), ಜನವರಿ 31: ಹಾವಿದ್ದ ಖಿಚಡಿಯನ್ನು ಸರಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ ಎಂದು ಮಹಾರಾಷ್ಟ್ರದ ನಾಂದೇಡ್ ನ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಬುಧವಾರ ಸಂಭವಿಸಿದ್ದು, ಗರ್ಗವಾನ್ ಜಿಲ್ಲಾ ಪರಿಷತ್ ಪ್ರಾಥಮಿಕ ಶಾಲೆಯಲ್ಲಿ ವರದಿ ಆಗಿದೆ. ಈ ಶಾಲೆ ನಾಂದೇಡ್ ನಿಂದ ಐವತ್ತು ಕಿ.ಮೀ. ದೂರದಲ್ಲಿದೆ.
ಒಂದರಿಂದ ಐದನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಂಬತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವಾಗಿ ಉಣಬಡಿಸಲಾಗಿದೆ. ಮಕ್ಕಳಿಗೆಂದು ಊಟ ವಿತರಿಸಲು ಆರಂಭಿಸಿದಾಗ ಖಿಚಡಿ ಇದ್ದ ದೊಡ್ಡ ಪಾತ್ರೆಯಲ್ಲಿ ಶಾಲಾ ಸಿಬ್ಬಂದಿಗೆ ಹಾವು ಕಂಡುಬಂದಿದೆ. ಈ ಘಟನೆಯನ್ನು ನಾಂದೇಡ್ ನ ಜಿಲ್ಲಾ ಶಿಕ್ಷಣಾಧಿಕಾರಿ ಪ್ರಶಾಂತ್ ದಿಗ್ರಸ್ಕರ್ ಖಾತ್ರಿ ಪಡಿಸಿದ್ದಾರೆ.
ಹಾವು ಇರುವುದು ಕಂಡುಬಂದ ಮೇಲೆ ಊಟ ವಿತರಿಸುವುದನ್ನು ತಕ್ಷಣ ನಿಲ್ಲಿಸಲಾಯಿತು. ಹಲವು ಮಕ್ಕಳು ಬುಧವಾರ ಉಪವಾಸ ಇರಬೇಕಾಯಿತು. ನಾವು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ತನಿಖೆಗೆ ಆದೇಶಿಸಿದ್ದೇವೆ. ಇಲಾಖೆಯಿಂದ ತಂಡವೊಂದು ಆ ಹಳ್ಳಿಗೆ ತೆರಳಿದ್ದು, ವಿಚಾರಣೆ ನಡೆಸಿದ ನಂತರ ಬರುವ ವರದಿ ಆಧಾರದಲ್ಲಿ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಖಿಚಡಿ ತಯಾರು ಮಾಡುವ ಗುತ್ತಿಗೆಯನ್ನು ಶಾಲಾ ಆಡಳಿತ ಮಂಡಳಿಯು ಸ್ಥಳೀಯ ಗುಂಪುಗಳಿಗೆ ಅಥವಾ ಸರಕಾರೇತರ ಸಂಸ್ಥೆಗಳಿಗೆ ನೀಡುತ್ತದೆ. ಮಕ್ಕಳು ಶಾಲೆಗೆ ಬರುವಂತೆ ಮಾಡಲು ವಾರಕ್ಕೆ ಒಂದು ದಿನ ಪೋಷಕಾಂಶಯುಕ್ತವಾದ ಖಿಚಡಿ ಮಾಡಿಕೊಡಲಾಗುತ್ತದೆ. ಇದರಿಂದ ನಿತ್ಯವೂ ಒಂದೂಕಾಲು ಕೋಟಿ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತದೆ.












Click it and Unblock the Notifications