ಎನ್ ಡಿಎಗೆ ಆಘಾತ: ಮೈತ್ರಿಕೂಟದಿಂದ ಹೊರ ನಡೆದ ಶಿವಸೇನಾ
ಮುಂಬೈ, ಜನವರಿ 23: ಎನ್ಡಿಎ ಮೈತ್ರಿಕೂಟದಿಂದ ಶಿವಸೇನಾ ಹೊರನಡೆದಿದೆ. ಮುಂಬರುವ 2019ರ ಲೋಕಸಭೆ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮಂಗಳವಾರದಂದು ಘೋಷಿಸಿದೆ.
ಶಿವಸೇನಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಸಂಜಯ್ ರಾವುತ್ ಅವರು ಈ ಬಗ್ಗೆ ನಿರ್ಣಯ ಮಂಡಿಸಿದ್ದು, ಇದಕ್ಕೆ ಸರ್ವಾನುಮತದ ಒಪ್ಪಿಗೆ ಸಿಕ್ಕಿದೆ. ಈ ನಡುವೆ ಆದಿತ್ಯ ಠಾಕ್ರೆ ಅವರನ್ನು ರಾಷ್ಟ್ರೀಯ ಕಾರ್ಯಕಾರಿಣಿಗೆ ಸೇರಿಸಿಕೊಳ್ಳಲಾಗಿದೆ.
ನ್ಯಾಷನಲ್ ಡೆಮೊಕ್ರಾಟಿಕ್ ಅಲೈಯನ್ಸ್ (ಎನ್ಡಿಎ) ನ ಅತಿ ಹಳೆಯ ಮಿತ್ರ ಪಕ್ಷವಾದ ಶಿವಸೇನಾ ಈ ರೀತಿ ನಿರ್ಣಯ ತೆಗೆದುಕೊಂಡಿರುವುದರಿಂದ ಬಿಜೆಪಿ ತನ್ನ ತಂತ್ರಗಾರಿಕೆಯನ್ನು ಬದಲಾಯಿಸಿಕೊಳ್ಳಬೇಕಾಗಿದೆ. 90ರ ದಶಕದಲ್ಲಿ ಮಹಾರಾಷ್ಟ್ರದಲ್ಲಿ ಆಳ್ವಿಕೆ ಕಂಡುಕೊಂಡ ಸೇನಾಗೆ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮುಖಭಂಗವಾಗಿತ್ತು.

ಬಿಜೆಪಿ ಸ್ವಂತ ಬಲದಿಂದ ಅಧಿಕಾರ ಸ್ಥಾಪಿಸಿ, ಮುಖ್ಯಮಂತ್ರಿ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನು ಕೂರಿಸಿತ್ತು. ಚುನಾವಣೆ ಬಳಿಕ ಶಿವಸೇನಾ ಹಾಗೂ ಎನ್ ಜೆಪಿ ಮೈತ್ರಿ ಸಾಧಿಸಿತು. ಆದರೆ, ಭಾಷಾನೀತಿ, ಸ್ಥಳೀಯರಿಗೆ ಉದ್ಯೋಗ ಸೇರಿದಂತೆ ಸಾಕಷ್ಟು ವಿಷಯದಲ್ಲಿ ಉಭಯ ಪಕ್ಷಗಳ ನಡುವೆ ವೈಮನಸ್ಯ ಉಂಟಾಯಿತು. ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಿಳಿಯಲು ನಿರ್ಧರಿಸಲಾಯಿತು.
ಗೋವಾ, ಗುಜರಾತ್ ನಲ್ಲೂ ಶಿವಸೇನೆ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿತ್ತು. ಕರ್ನಾಟಕ ವಿಧಾನಸಭೆ ಚುನಾವಣೆ 2018ರಲ್ಲೂ ಶಿವಸೇನೆ ಏಕಾಂಗಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ.
ಗೋವಾ, ಗುಜರಾತ್ ನಲ್ಲೂ ಶಿವಸೇನೆ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿತ್ತು. ಕರ್ನಾಟಕ ವಿಧಾನಸಭೆ ಚುನಾವಣೆ 2018ರಲ್ಲೂ ಶಿವಸೇನೆ ಏಕಾಂಗಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಸದ್ಯ ಲೋಕಸಭೆಯಲ್ಲಿ 18 ಮಂದಿ ಸದಸ್ಯರಿದ್ದು, ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ 63 ಮಂದಿ ಸದಸ್ಯರಿದ್ದಾರೆ.












Click it and Unblock the Notifications