ಸಚಿನ್ ವಾಜೆ ಬಗ್ಗೆ ಮೊದಲೇ ತಿಳಿದಿತ್ತು, ಮುಖಂಡರಿಗೆ ಎಚ್ಚರಿಕೆಯನ್ನೂ ನೀಡಿದ್ದೆ: ಸಂಜಯ್ ರಾವತ್
ಮುಂಬೈ, ಮಾರ್ಚ್ 29: ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಮುಂದೆ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಗ್ಗೆ ಮೊದಲೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾಗಿ ಶಿವಸೇನಾ ಮುಖಂಡ ಸಂಜಯ್ ರಾವತ್ ತಿಳಿಸಿದ್ದಾರೆ.
ಸಚಿನ್ ವಾಜೆ ಬಗ್ಗೆ ತಮಗೆ ತಿಳಿದಿತ್ತು. ಹೀಗಾಗಿ ಆತ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಈ ಮೊದಲೇ ತಿಳಿಸಿದ್ದಾಗಿ ಅವರು ಹೇಳಿದ್ದಾರೆ. ವಾಜೆ ಪ್ರಕರಣವು ಉದ್ಧವ್ ಠಾಕ್ರೆ ಸರ್ಕಾರಕ್ಕೆ ಕೆಲವು ಪಾಠಗಳನ್ನು ಕಳುಹಿಸಿದೆ ಎಂದಿದ್ದಾರೆ.
'ಮಹಾರಾಷ್ಟ್ರ ಪೊಲೀಸ್ ಪಡೆಗೆ ವಾಜೆ ಅವರನ್ನು ಮರಳಿ ಸೇರಿಸುವಾಗ, ಅವರು ನಮಗೆ ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ನಾನು ಕೆಲವು ನಾಯಕರಿಗೆ ಮಾಹಿತಿ ನೀಡಿದ್ದೆ. ಆತನ ನಡವಳಿಕೆ ಮತ್ತು ಕೆಲಸದ ರೀತಿ ಸರ್ಕಾರಕ್ಕೆ ತೊಂದರೆಗಳನ್ನು ತಂದೊಡ್ಡಬಹುದು ಎಂದು ಅನಿಸಿತ್ತು. ಆ ನಾಯಕರ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ ನಾನು ಹೇಳಿದ ಮಾತುಗಳು ಅವರಿಗೆ ಚೆನ್ನಾಗಿ ನೆನಪಿರುತ್ತದೆ' ಎಂದು ಹೇಳಿದ್ದಾರೆ.

ತಾವು ಹಲವು ದಶಕಗಳ ಕಾಲ ಪತ್ರಕರ್ತರಾಗಿದ್ದು, ವಾಜೆ ಬಗ್ಗೆ ತಿಳಿದಿತ್ತು. ಆ ವ್ಯಕ್ತಿ ಕೆಟ್ಟವರಲ್ಲ. ಆದರೆ ಕೆಲವು ನಿರ್ದಿಷ್ಟ ಸನ್ನಿವೇಶಗಳು ಅವರನ್ನು ಹಾಗೆ ಮಾಡಿವೆ. ವಾಜೆಯ ಚಟುವಟಿಕೆಗಳು ಮತ್ತು ವಿವಾದಗಳ ಸಂಪೂರ್ಣ ಘಟನೆ ಎಂವಿಎ ಸರ್ಕಾರಕ್ಕೆ ಪಾಠ ಕಲಿಸಿದೆ. ಅದು ಹಾಗೆ ಆಗಿದ್ದು ಒಳ್ಳೆಯದೇ ಆಯಿತು. ನಮಗೆ ಕೆಲವು ಪಾಠಗಳನ್ನು ಕಲಿಸಿತು ಎಂದು ತಿಳಿಸಿದ್ದಾರೆ.












Click it and Unblock the Notifications