ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಆರೋಗ್ಯ ಸ್ಥಿತಿ ಗಂಭೀರ
ಮುಂಬೈ, ಫೆಬ್ರವರಿ 5: ಖ್ಯಾತ ಹಿರಿಯ ಗಾಯಕಿ ಲತಾ ಮಂಗೇಶ್ಕರ್ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಗಾಯಕಿ ಲತಾ ಮಂಗೇಶ್ಕರ್ ಕೊರೋನಾ ಕಾಂಪ್ಲಿಕೇಷನ್‌ಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿ ಇದೀಗ ಐಸಿಯು(ICU)ನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲತಾ ಮಂಗೇಶ್ಕರ್ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಈ ಹಿಂದೆ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಹೇಳೀದ್ದರು. ಅವರು ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದರು. ಆದರೆ ಈಗ ಲತಾ ಅವರ ಆರೋಗ್ಯ ಸ್ಥಿತಿ ಕ್ಷೀಣಿಸುತ್ತಿದೆ ಎನ್ನಲಾಗಿದೆ.
ಲತಾ ಮಂಗೇಶ್ಕರ್ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟ ನಂತರ ಕಳೆದ ತಿಂಗಳು ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಕಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ವೆಂಟಿಲೇಟರ್‌ನಲ್ಲಿದ್ದಾರೆ ಎನ್ನಲಾಗಿದೆ. 92 ವರ್ಷದ ಗಾಯಕಿಗೆ ನ್ಯುಮೋನಿಯಾಗೂ ಚಿಕಿತ್ಸೆ ನೀಡಲಾಗುತ್ತಿದೆ.

ವೆಂಟಿಲೇಟರ್ ಸಪೋರ್ಟ್‌ನಲ್ಲಿ ಗಾಯಕಿ
ಲತಾ ಮಂಗೇಶ್ಕರ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯ ಡಾ. ಪ್ರತಿತಿ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಈಗ ಲತಾ ಮಂಗೇಶ್ಕರ್ ಅವರನ್ನು ಐಸಿಯುವಿನಲ್ಲಿರಿಸಲಾಗಿದ್ದು, ಮತ್ತೊಮ್ಮೆ ವೆಂಟಿಲೇಟರ್ ಸಪೋರ್ಟ್‌ನಲ್ಲಿಡಲಾಗಿದೆ. ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದ್ದು, ಅವರನ್ನು ನಿಗಾದಲ್ಲಿರಿಸಲಾಗಿದೆ ಎಂದಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ ಗಾಯಕಿಯ ತಂಡವು ವದಂತಿಗಳನ್ನು ತಳ್ಳಿಹಾಕುವ ನಿಟ್ಟಿನಲ್ಲಿ ಅವರ ಆರೋಗ್ಯದ ಬಗ್ಗೆ ಮಾಹಿತಿಗಳನ್ನು ಸಕ್ರಿಯವಾಗಿ ಹಂಚಿಕೊಳ್ಳುತ್ತಿದೆ.
ಲತಾ ಮಂಗೇಶ್ಕರ್ ಅವರು ಹಿಂದಿ, ಮರಾಠಿ, ಬೆಂಗಾಲಿ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಹಾಡಿದ್ದಾರೆ. ಲತಾ ಅವರು ಭಾರತ ರತ್ನ, ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳ ಜೊತೆಗೆ ಹಲವಾರು ರಾಷ್ಟ್ರೀಯ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಲತಾ ಮಂಗೇಶ್ಕರ್ ಅವರ ಕೊನೆಯ ಸಂಪೂರ್ಣ ಆಲ್ಬಂ 2004ರ ವೀರ್-ಜಾರಾ ಆಗಿತ್ತು.
ತಂದೆ ಪಂಡಿತ್ ದೀನನಾಥ್ ಮಂಗೇಶ್ಕರ್ 1942ರ ಮರಣದ ನಂತರ ತಮ್ಮ ಕುಟುಂಬಕ್ಕೆ ನೆರವಾಗಲು ಹಾಡಲು ಪ್ರಾರಂಭಿಸಿದ ಲತಾ ಮಂಗೇಶ್ಕರ್ ಅವರು ಶಾಸ್ತ್ರೀಯ ಗಾಯಕಿ ಮತ್ತು ರಂಗಭೂಮಿ ನಟಿಯಾಗಿದ್ದರು. ಬಾಲಿವುಡ್‌ನಲ್ಲಿ ಲತಾ ಮಂಗೇಶ್ಕರ್ ಅವರು 1948ರ ಚಲನಚಿತ್ರ ಮಜ್ಬೂರ್‌ನ ದಿಲ್ ಮೇರಾ ತೋಡಾ ಹಾಡಿನ ಮೂಲಕ ತಮ್ಮ ಮೊದಲ ಹಿಟ್ ಕೊಟ್ಟರು.












Click it and Unblock the Notifications