ಅಯ್ಯೋ ವಿಧಿಯೇ! ನಡೆದು ನಡೆದು ಸುಸ್ತಾಗಿ ರೈಲು ಹಳಿ ಮೇಲೆ ಮಲಗಿದ್ದರು
ಔರಂಗಾಬಾದ್, ಮೇ 8: ಮಹಾರಾಷ್ಟ್ರದಲ್ಲಿ ಇಂದು ಬೆಳಿಗ್ಗೆ ನಡೆದ ರೈಲು ಅಪಘಾತದ ಬಗ್ಗೆ ಇಡೀ ದೇಶವೇ ಮರುಕ ಪಡುತ್ತಿದೆ.
ಲಾಕ್‌ಡೌನ್ ನಲ್ಲಿ ಸಿಲುಕಿ ತಮ್ಮ ಊರುಗಳಿಗೆ ಛತ್ತೀಸ್ ಗಢದಿಂದ ಗುರುವಾರ ಮಹಾರಾಷ್ಟ್ರದ ಕಡೆ ಹೊರಟಿದ್ದ ವಲಸೆ ಕಾರ್ಮಿಕರು ಔರಂಗಾಬಾದ್ ಜಾಲ್ನಾ ನಡುವಿನ ರೈಲು ಹಳಿಯಲ್ಲಿ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. 16 ಕಾರ್ಮಿಕರು ಮೃತಪಟ್ಟಿದ್ದು, 3 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಕುರಿತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಲಾಕ್‌ಡೌನ್ ಪರಿಣಾಮವಾಗಿ ಊರಿಗೆ ತೆರಳಲು ಕಾರ್ಮಿಕರು ರೈಲ್ವೆ ಹಳಿಯಗುಂಟ ನಡೆದುಕೊಂಡು ಹೊರಟಿದ್ದರು.

ನಡೆದು ನಡೆದು ಸುಸ್ತಾಗಿ ಹಳಿ ಮೇಲೆ ಮಲಗಿದ್ದರು
ಛತ್ತೀಸ್ ಗಢನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಮೃತರು ಲಾಕ್‌ಡೌನ್ ನಿಂದಾಗಿ ತಮ್ಮ ಊರುಗಳಿಗೆ ತಲುಪಲಾಗದೇ ತೊಂದರೆಗೊಳಗಾಗಿದ್ದರು. ರಸ್ತೆಯ ಮೂಲಕ ಹೊರಟರೆ ಕೋವಿಡ್ ಹಿನ್ನೆಲೆಯಲ್ಲಿ ಪೊಲೀಸರು ತಮ್ಮನ್ನು ಬಿಡುವುದಿಲ್ಲ ಎಂದು ತಿಳಿದು ಕಾರ್ಮಿಕರು ರೈಲು ಹಳಿಯ ಮೂಲಕ ಊರು ತಲುಪುವ ವಿಚಾರ ಮಾಡಿದ್ದಾರೆ. ರೈಲು ಹಳಿಗುಂಟ ನಡೆದು ನಡೆದು ಸುಸ್ತಾಗಿ ಔರಂಗಾಬಾದ್ ಜಾಲ್ನಾ ರೈಲು ಹಳಿಯ ಮೇಲೆಯೇ ನಿದ್ರೆಗೆ ಜಾರಿದ್ದಾರೆ. ಔರಂಗಾಬಾದ್ ಕಡೆಯಿಂದ ಬಂದ ಗೂಡ್ಸ್ ರೈಲು ಕಾರ್ಮಿಕರ ಮೇಲೆ ಹರದಿದೆ. ಇದರಿಂದ ಸ್ಥಳದಲ್ಲೇ 14 ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಔರಂಗಾಬಾದ್ ರೈಲ್ವೆ ಪೊಲೀಸ್ ತಿಳಿಸಿದ್ದಾರೆ.

ಕಾರ್ಮಿಕರನ್ನು ಗಮನಿಸಿದ್ದ ರೈಲು ಚಾಲಕ
ರೈಲು ಹಳಿಯ ಮೇಲೆ ಯಾರೋ ಇರುವುದನ್ನು ನೋಡಿದ ಗೂಡ್ಸ್ರೈಲು ಚಾಲಕ ರೈಲನ್ನು ನಿಲ್ಲಿಸಲು ಪ್ರಯತ್ನ ಪಟ್ಟಿದ್ದಾನೆ. ಆದರೆ, ವೇಗದಲ್ಲಿ ರೈಲು ಓಡುತ್ತಿದ್ದರಿಂದ ಕಾರ್ಮಿಕರ ಪ್ರಾಣ ಉಳಿಸಲು ಆಗಲಿಲ್ಲ ಎಂದು ರೈಲು ಚಾಲಕ ಔರಂಗಾಬಾದ್ ರೈಲ್ವೆ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಪ್ರಧಾನಿ ನರೇಂದ್ರ ಮೋದಿ ಕಂಬನಿ
ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಕಾರ್ಮಿಕರ ಸಾವಿನಿಂದ ತೀವ್ರ ನೋವಾಗಿದೆ ಎಂದಿದ್ದಾರೆ. ಅಗತ್ಯ ಕ್ರಮ ಕೈಗೊಳ್ಳಲು ರೈಲ್ವೆ ಸಚಿವಪಿಯೂಷ್ ಗೋಯಲ್ ಅವರಿಗೆ ಸೂಚಿಸಿದ್ದೇನೆ ಎಂದಿದ್ದಾರೆ.

ಔರಂಗಾಬಾದ್ ಜಿಲ್ಲೆಯವರು
ಮೃತಪಟ್ಟ ಕಾರ್ಮಿಕರು ಛತ್ತೀಸ್ ಗಢದಿಂದ 47 ಕಿಮೀ ನಡೆದಿದ್ದರು. ಮೃತರೆಲ್ಲರೂ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯವರು ಎಂದು ವರದಿಗಳು ತಿಳಿಸಿವೆ.












Click it and Unblock the Notifications