ಪ್ರಿಯಾಂಕಾ ಪುತ್ರಿಗೆ ಅತ್ಯಾಚಾರ ಬೆದರಿಕೆ: ಬಂಧಿತ ಆರೋಪಿ ಬಿಜೆಪಿಯವನೇ?
ಮುಂಬೈ, ಜುಲೈ 06: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರ ಮಗಳನ್ನು ಅತ್ಯಾಚಾರ ಮಾಡುವುದಾಗಿ ಟ್ವಿಟ್ಟರ್ ನಲ್ಲಿ ಬೆದರಿಕೆ ಒಡ್ಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಮುಂಬೈ ಪೊಲೀಸರು ನಿನ್ನೆ(ಜು.05) ಬಂಧಿಸಿದ್ದಾರೆ.
ಅಷ್ಟಕ್ಕೂ ಬಂಧಿತನಾದ ಅಹ್ಮದಾಬಾದಿನ ಗಿರೀಶ್ ಮಹೇಶ್ವರಿ(36) ಬಿಜೆಪಿಗೆ ಸೇರಿದವನೇ ಎಂಬುದು ಇದೀಗ ವಿವಾದ ಸೃಷ್ಟಿಸುತ್ತಿರುವ ವಿಷಯ.
ರಾಜಸ್ಥಾನ ಮೂಲದ ಗಿರೀಶ್ ಮಹೇಶ್ವರಿ ಅಹ್ಮದಾಬಾದಿನಲ್ಲಿ ಕಂಪನಿಯೊಂದರಲ್ಲಿ ಅಕೌಂಟಂಟ್ ಆಗಿ ಕೆಲಸ ಮಾಡೂತ್ತಿದ್ದ. ಈತನ ಫೇಸ್ ಬುಕ್ ಪ್ರೊಫೈಲ್ ಹೇಳುವ ಪ್ರಕಾರ ಈತ ಬಿಜೆಪಿ ಕಾರ್ಯಕರ್ತ. ಆದರೆ ಈ ಕುರಿತು ಬಿಜೆಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೆಲವು ದಿನಗಳ ಹಿಂದೆ ಪ್ರಿಯಾಂಕಾ ಚತುರ್ವೇದಿ ಅವರಿಗೆ ಟ್ವೀಟ್ ಮಾಡಿದ್ದ ಆರೋಪಿ, ಅವರ 10 ವರ್ಷ ವಯಸ್ಸಿನ ಪುತ್ರಿಯ ಮೇಲೆ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಒಡ್ಡಿದ್ದ. ಈ ಸಂಬಂಧ ಅವರು ಪೊಲೀಸರಿಗೆ ದೂರು ನೀಡಿದ್ದರು.

"ನಾವು ರಾಜಕಾರಣಿಗಳು ಪ್ರತಿದಿನ ಟ್ರೋಲ್ ಆಗುತ್ತೇವೆ. ಅದೇನು ಹೊಸತಲ್ಲ. ಆದರೆ ನನ್ನ ಮಗಳ ಬಗ್ಗೆ ಮಾತನಾಡುವುದು ಸರಿಯೇ? ಅದೂ ಇಷ್ಟು ಅವಾಚ್ಯವಾಗಿ? ಅದಕ್ಕೆಂದೇ ನಾನು ಅವರ ವಿರುದ್ಧ ದೂರು ನೀಡುತ್ತಿದ್ದೇನೆ" ಎಂದು ಪ್ರಿಯಾಂಕಾ ಚತುರ್ವೇದಿ ಹೇಳಿದ್ದರು.
ದೂರು ಸ್ವೀಕರಿಸಿದ ಪೊಲೀಸರು ಆರೋಪಿಯನ್ನು ಮುಂಬೈಯಲ್ಲಿ ಬಂಧಿಸಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications