ಜೇಬುಗಳ್ಳರಂತೆ ಗಮನ ಬೇರೆಡೆ ಸೆಳೆಯುವ ಮೋದಿ: ರಾಹುಲ್ ಟೀಕೆ
ಮುಂಬೈ, ಅಕ್ಟೋಬರ್ 16: 'ಕಳವು ಮಾಡಲು ಜನರ ಗಮನವನ್ನು ಬೇರೆಡೆ ಸೆಳೆಯುವ ಜೇಬುಗಳ್ಳರಂತೆ ಪ್ರಧಾನಿ ನರೇಂದ್ರ ಮೋದಿ ಜನರ ಗಮನದ ದಿಕ್ಕು ಬದಲಿಸುವ ತಂತ್ರ ಬಳಸುತ್ತಿದ್ದಾರೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸಲುವಾಗಿ ವಿದರ್ಭದ ಯವತ್ಮಾಲ್‌ನಲ್ಲಿ ಪ್ರಚಾರ ನಡೆಸಿದ ಅವರು ಮೋದಿಯನ್ನು ಗುರಿಯನ್ನಾಗಿರಿಸಿಕೊಂಡು ಟೀಕಾಪ್ರಹಾರ ನಡೆಸಿದರು.
'ಮೋದಿ ಅವರು ಅದಾನಿ ಮತ್ತು ಅಂಬಾನಿಯಂತಹ ಕೈಗಾರಿಕೋದ್ಯಮಿಗಳ ಲೌಡ್‌ಸ್ಪೀಕರ್ ಆಗಿದ್ದಾರೆ. ಕಳ್ಳತನ ಮಾಡುವ ಮುನ್ನ ಜೇಬುಗಳ್ಳ ಜನರ ಗಮನವನ್ನು ಬೇರೆಡೆ ಸೆಳೆಯುವಂತೆ ಕೆಲವು ಆಯ್ದ ಕೈಗಾರಿಕೋದ್ಯಮಿಗಳಿಗೆ ನಿಮ್ಮ ಹಣವನ್ನು ವರ್ಗಾಯಿಸುವಾಗ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯುವುದಷ್ಟೇ ಅವರ ಕೆಲಸ' ಎಂದು ರಾಹುಲ್ ಗಾಂಧಿ ಟೀಕಿಸಿದರು.

'ಜನರನ್ನು ಛಿದ್ರಗೊಳಿಸುವ ಮೂಲಕ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಮೋದಿ ಯಾವಾಗಲೂ ಪ್ರಯತ್ನಿಸುತ್ತಾರೆ. ಪ್ರಧಾನಿ ಚಂದ್ರಯಾನ ಯೋಜನೆ ಮತ್ತು ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿ ಕುರಿತು ಮಾತನಾಡುತ್ತಾರೆ. ಆದರೆ ರೈತರ ಸಂಕಷ್ಟ ಹಾಗೂ ನಿರುದ್ಯೋಗದ ಬಗ್ಗೆ ಮೌನ ವಹಿಸುತ್ತಾರೆ. ಸರಕು ಮತ್ತು ಸೇವಾ ತೆರಿಗೆ ಹಾಗೂ ಅಪನಗದೀಕರಣದ ಎರಡು ದೌರ್ಜನ್ಯಗಳು ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು, ರೈತರು, ಕಾರ್ಮಿಕರು ಮತ್ತು ಬಡ ಜನರ ಬೆನ್ನೆಲುಬನ್ನೇ ಮುರಿದವು. ಬಿಜೆಪಿ ಅಧಿಕಾರದಲ್ಲಿರುವಷ್ಟೂ ಕಾಲ ನಿರುದ್ಯೋಗವು ದೇಶವನ್ನು ಕಾಡುವುದು ಮುಂದುವರಿಯಲಿದೆ' ಎಂದರು.
'ಬಿಜೆಪಿ ಸರ್ಕಾರದ ಶ್ರೀಮಂತ ಪರ ನೀತಿಗಳು ಭಾರತ ಅರ್ಥಿಕತೆಯ ಸೋಲಿಗೆ ಕಾರಣವಾಗಿದೆ. ಬಡ ವ್ಯಕ್ತಿ ಹಣ ಪಡೆದಾಗ ಆತ ಕೊಳ್ಳಲು ಆರಂಭಿಸುತ್ತಾನೆ. ಬೇಡಿಕೆ ಹೆಚ್ಚಾದಾಗ ಉತ್ಪಾದನೆಗೂ ಉತ್ತೇಜನ ಸಿಗುತ್ತದೆ' ಎಂದು ಹೇಳಿದರು.
'ರಾಜನಾಥ್ ಸಿಂಗ್ ಅವರು ಫ್ರಾನ್ಸ್‌ಗೆ ಭೇಟಿ ನೀಡಿದಾಗ ಫೈಟರ್ ಜೆಟ್‌ಗೆ ಪೂಜೆ ಸಲ್ಲಿಸಿದ್ದರು. ಆದರೆ ಜೆಟ್ ಒಪ್ಪಂದದಲ್ಲಿ 35 ಸಾವಿರ ಕೋಟಿ ರೂ ಕಳವು ಮಾಡಲಾಗಿತ್ತು. ಇದರ ಬಗ್ಗೆ ಮಾಧ್ಯಮಗಳು ಬರೆಯುವುದಿಲ್ಲ. ಏಕೆಂದರೆ ಅವುಗಳನ್ನು ಉದ್ದಿಮೆದಾರರು ನಿಯಂತ್ರಿಸುತ್ತಿದ್ದಾರೆ. ನಿಮ್ಮ ಹಣವನ್ನು ಮಾಧ್ಯಮಗಳಿಗೆ ನೀಡಲಾಗುತ್ತಿದೆ. ಅವರಿಮದ ಅವರು ಮೋದಿಗೆ ಪ್ರಚಾರ ನೀಡುತ್ತಾರೆ' ಎಂದು ಆರೋಪಿಸಿದರು.












Click it and Unblock the Notifications