ಮಸೀದಿಗಳಲ್ಲಿನ ಧ್ವನಿವರ್ಧಕ ತೆಗೆಯುವಂತೆ ಪ್ರಚೋದನೆ ನೀಡಿದ ರಾಜ್ ಠಾಕ್ರೆ ವಿರುದ್ಧ ಕೇಸ್
ಮುಂಬೈ, ಮೇ 3: ಮಹಾರಾಷ್ಟ್ರದಲ್ಲಿ ಈದ್‌ಗೆ ಮುನ್ನ ಅಂದರೆ ಮೇ 3ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕುವಂತೆ ಒತ್ತಾಯಿಸಿ ಮಾಡಿರುವ ಪ್ರಚೋದನಕಾರಿ ಭಾಷಣ ಮಾಡಿರುವ ಹಿನ್ನೆಲೆ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.
ರಾಜ್ಯದಲ್ಲಿ ಈದ್ ಹಬ್ಬದ ಆಚರಣೆ ಹಿನ್ನಲೆಯಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಎಲ್ಲಾ ಪೊಲೀಸ್ ಸಿಬ್ಬಂದಿಯ ರಜೆಗಳನ್ನು ರದ್ದುಗೊಳಿಸಲಾಗಿದೆ.
"ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆಗೆದು ಹಾಕುವಂತೆ ಒತ್ತಾಯಿಸಿ ಪ್ರಚೋದನಕಾರಿ ಭಾಷಣ ಮಾಡಿರುವ ರಾಜ್ ಠಾಕ್ರೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಮಹಾರಾಷ್ಟ್ರ ಪೊಲೀಸ್ ಮುಖ್ಯಸ್ಥ ರಜನೀಶ್ ಸೇಠ್ ಹೇಳಿದ್ದಾರೆ.

"ರಾಜ್ ಠಾಕ್ರೆಯವರ ಭಾಷಣವನ್ನು ಔರಂಗಾಬಾದ್ ಪೊಲೀಸ್ ಕಮಿಷನರ್ ಪರಿಶೀಲಿಸುತ್ತಿದ್ದಾರೆ. ಅವರು ಇಂದು ಅಗತ್ಯವಿರುವ ಯಾವುದೇ ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತಾರೆ" ಎಂದು ಸೇಠ್ ತಿಳಿಸಿದ್ದಾರೆ.
"ಮಹಾರಾಷ್ಟ್ರ ಪೊಲೀಸರು ಯಾವುದೇ ರೀತಿಯ ಕಾನೂನು-ಸುವ್ಯವಸ್ಥೆ ಪರಿಸ್ಥಿತಿಯನ್ನು ನಿಭಾಯಿಸಲು ಸಮರ್ಥರಾಗಿದ್ದಾರೆ. ರಾಜ್ಯದಲ್ಲಿ SRPF ಮತ್ತು ಗೃಹರಕ್ಷಕರನ್ನು ನಿಯೋಜಿಸಲಾಗಿದೆ" ಎಂದು ಸೇಠ್ ತಿಳಿಸಿದರು. ಶಾಂತಿ ಕಾಪಾಡುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ" ಎಂದು ಹೇಳಿದರು.

ಮೇ 3ರ ಗಡುವು; ಮಹಾರಾಷ್ಟ್ರದಲ್ಲಿ ಮೇ 3ರೊಳಗೆ ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದು ಹಾಕಬೇಕು ಎಂದು ರಾಜ್ ಠಾಕ್ರೆ ಕರೆ ನೀಡಿದ್ದರು. ಮಸೀದಿಗಳ ಹೊರಗೆ ಧ್ವನಿವರ್ಧಕಗಳನ್ನು ತೆಗೆದುಹಾಕದಿದ್ದರೆ ಹನುಮಾನ್ ಚಾಲೀಸಾವನ್ನು ಹಾಕುವಂತೆ ಹೇಳಿದ್ದರು. ಅಲ್ಲದೇ "ಮಸೀದಿಗಳಿಂದ ಧ್ವನಿವರ್ಧಕಗಳನ್ನು ತೆಗೆದುಹಾಕಲು ಮೇ 3ರ ಗಡುವಿನ ನಂತರ ಏನಾಗುತ್ತದೆ ಎಂಬುದಕ್ಕೆ ನಾನು ಜವಾಬ್ದಾರನಾಗಿ ಇರುವುದಿಲ್ಲ" ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಔರಂಗಾಬಾದ್‌ನ ಸಾರ್ವಜನಿಕ ಮೆರವಣಿಗೆಯಲ್ಲಿ ಹೇಳಿದ್ದರು.
ಎಂಎನ್‌ಎಸ್‌ನ ಔರಂಗಾಬಾದ್ ಘಟಕದ ಮುಖ್ಯಸ್ಥ ಸುಮೀತ್ ಖಂಬೆಕರ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, "ಪಕ್ಷದ ಮುಖ್ಯಸ್ಥ ರಾಜ್ ಠಾಕ್ರೆಯವರ ಆದೇಶವನ್ನು ಪಾಲನೆ ಮಾಡಲಾಗುವುದು" ಎಂದು ಹೇಳಿದ್ದಾರೆ.
ದೇಶದ ವಿವಿಧ ರಾಜ್ಯಗಳಲ್ಲಿ ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೇಲೆ ನಿಷೇಧ ಹೇರಬೇಕು ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ. ಈ ಗದ್ದಲದ ನಡುವೆ ರಾಜ್ ಠಾಕ್ರೆ ಮೈಕ್ ತೆರವು ಮಾಡಲು ಗಡುವು ವಿಧಿಸಿದ್ದರು.
ಕಾನೂನು ಸುವ್ಯವಸ್ಥೆ ಬಗ್ಗೆ ಪರಿಶೀಲನೆ: ಮಹಾರಾಷ್ಟ್ರದ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಮತ್ತು ಪೊಲೀಸ್ ಮುಖ್ಯಸ್ಥ ರಜನೀಶ್ ಸೇಠ್ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಸಭೆ ನಡೆಸಿದರು.
ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಸರ್ಕಾರದ ಆದೇಶದ ಮೇರೆಗೆ ಧಾರ್ಮಿಕ ಸ್ಥಳಗಳಿಂದ ಸುಮಾರು 54,000 ಅನಧಿಕೃತ ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿತ್ತು.












Click it and Unblock the Notifications