ಉದ್ಧವ್ ಠಾಕ್ರೆ ಒಬ್ಬ ದುಷ್ಟ ರಾಜ ಎಂದ ಫಡ್ನವೀಸ್ ಪತ್ನಿ
ಮುಂಬೈ, ಜೂ. 22: ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಮಧ್ಯೆ ರಾಜ್ಯದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಟ್ವಿಟರ್‌ನಲ್ಲಿ ಟೀಕೆ ಮಾಡಿ ಬಳಿಕ ತಮ್ಮ ಟ್ವೀಟ್‌ನ್ನು ತೆಗೆದುಹಾಕಿದ್ದಾರೆ.
ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಬಿಕ್ಕಟ್ಟು ಶುರುವಾಗಿದ್ದು, ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರನ್ನು ಟ್ವಿಟ್ಟರ್‌ನಲ್ಲಿ ಟೀಕೆ ಮಾಡಿದ ಮಹಾರಾಷ್ಟ್ರ ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತ ಫಡ್ನವಿಸ್ ಅವರು ಠಾಕ್ರೆ ಅವರನ್ನು ಒಬ್ಬ ದುಷ್ಟ ರಾಜ ಎಂದು ಟೀಕೆ ಮಾಡಿದ್ದಾರೆ. ಠಾಕ್ರೆ ಏಕ್ ಥಾ ಕಪತಿ ರಾಜಾ ಎಂದು ಬರೆದಿದ್ದರು. ಬಳಿಕ ಅವರು ತಮ್ಮ ಟ್ವಿಟ್‌ನ್ನು ಅಳಿಸಿ ಹಾಕಿದ್ದಾರೆ.
ಮಹಾರಾಷ್ಟ್ರ ರಾಜ್ಯ ಸರ್ಕಾರದ ಸಚಿವರು ಆಗಿರುವ ಏಕನಾಥ್ ಶಿಂಧೆ ಮತ್ತು ಶಿವಸೇನೆಯ 21 ಶಾಸಕರು ಹಾಗೂ ಇತರ ಸ್ವಾತಂತ್ರ ಶಾಸಕರು ಗುಜರಾತ್‌ನ ಸೂರತ್‌ಗೆ ತೆರಳಿ ಅಲ್ಲಿಂದ ಈಗ ಅಸ್ಸಾಂಗೆ ಹೋಗಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರವು - ಪಾಲುದಾರರಾದ ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಪತನದ ಅಪಾಯದಲ್ಲಿರುವಾಗ ಅಮೃತ ಫಡ್ನವಿಸ್ ಟ್ವೀಟ್ ಮಾಡಿದ್ದಾರೆ.

ತಮ್ಮ ನಡೆ ಮರುಪರಿಶೀಲಿಸುವಂತೆ ಸೂಚನೆ
ಶಿವಸೇನೆಯು ಬಿಜೆಪಿಯೊಂದಿಗಿನ ಮೈತ್ರಿಯನ್ನು ಪುನಃ ಮಾಡಿಕೊಳ್ಳಬೇಕು ಮತ್ತು ರಾಜ್ಯದಲ್ಲಿ ಆಡಳಿತವನ್ನು ಮುಂದುವರಿಸಬೇಕೆಂದು ಸಚಿವ ಏಕನಾಥ್ ಶಿಂಧೆ ಅವರು ಮುಖ್ಯಮಂತ್ರಿಗಳೊಂದಿಗಿನ ದೂರವಾಣಿ ಕರೆಯಲ್ಲಿ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಉದ್ದವ್ ಠಾಕ್ರೆ ಅವರು ತಮ್ಮ ನಡೆಯನ್ನು ಮರುಪರಿಶೀಲಿಸುವಂತೆ ಮತ್ತು ರಾಜ್ಯಕ್ಕೆ ಮರಳುವಂತೆ ಕೇಳಿಕೊಂಡರು ಎಂದು ಮೂಲಗಳು ಹೇಳಿವೆ.

ಎರಡು ಗಂಟೆಗಳ ಕಾಲ ಶಿಂಧೆ ಭೇಟಿ
ಸಚಿವ ಏಕನಾಥ್ ಶಿಂಧೆ ಅವರು ಇಲ್ಲಿಯವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಅಥವಾ ಯಾವುದೇ ದಾಖಲೆಗೆ ಸಹಿ ಮಾಡಿಲ್ಲ. ಆದರೆ ಶಿವಸೇನಾ ಪಕ್ಷದ ಒಳಿತಿಗಾಗಿ ಈ ಕ್ರಮವನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಶಿವಸೇನೆಯ ಇಬ್ಬರು ನಾಯಕರು ಬಂಡಾಯ ಶಾಸಕರು ತಂಗಿರುವ ಹೊಟೇಲ್‌ನಲ್ಲಿ ಎರಡು ಗಂಟೆಗಳ ಕಾಲ ಶಿಂಧೆ ಅವರನ್ನು ಭೇಟಿಯಾದರು. ಮಹಾರಾಷ್ಟ್ರದ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಏಕನಾಥ್ ಶಿಂಧೆ ಅವರೊಂದಿಗೆ ಸರ್ಕಾರ ರಚಿಸಲು ಪಕ್ಷವು ಮುಕ್ತವಾಗಿದೆ ಎಂದು ಹೇಳಿದ್ದಾರೆ.

ಶರದ್ ಪವಾರ್ ಅಘಾಡಿಯ ಕಿಂಗ್ ಮೇಕರ್
ಮಹಾರಾಷ್ಟ್ರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮಹಾರಾಷ್ಟ್ರ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಎನ್‌ಸಿಪಿ ನಾಯಕ ಶರದ್ ಪವಾರ್ ತಾವು ಸೈದ್ಧಾಂತಿಕವಾಗಿ ವಿರೋಧಿಸುವ ಪಕ್ಷಗಳನ್ನು ಒಟ್ಟುಗೂಡಿಸುವ ಮೂಲಕ ಮಹಾವಿಕಾಸ್ ಅಘಾಡಿಯ ಕಿಂಗ್ ಮೇಕರ್ ಎಂದು ಪರಿಗಣಿಸಲಾಗಿದೆ. ಆಡಳಿತವನ್ನು ಉಳಿಸುವ ಪ್ರಯತ್ನದಲ್ಲಿ ಮತ್ತೊಮ್ಮೆ ಮಹತ್ವದ ಆಟಗಾರನಾಗಿ ಅವರು ಹೊರಹೊಮ್ಮಿದ್ದಾರೆ.

ಮಹಾರಾಷ್ಟ್ರ ಅಘಾಡಿಯ ಬುಡಮೇಲು ಕೃತ್ಯ
ಮಹಾರಾಷ್ಟ್ರದಲ್ಲಿ ಮಹಾವಿಕಾಸ ಅಘಾಡಿ ಬಣದ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ. ಮುಖ್ಯಮಂತ್ರಿ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ ಸರ್ಕಾರಕ್ಕೆ ಎನ್ ಸಿಪಿ ಹಾಗೂ ಕಾಂಗ್ರೆಸ್ ಬೆಂಬಲ ನೀಡಿವೆ. ಮಹಾರಾಷ್ಟ್ರ ಅಘಾಡಿಯ ಬುಡಮೇಲು ಮಾಡುವ ಕೃತ್ಯಕ್ಕೆ ಸಚಿವ ಏಕನಾಥ್ ಶಿಂಧೆ ಈಗ ಕೈ ಹಾಕಿದ್ದಾರೆ. ಮಹಾವಿಕಾಸ ಅಘಾಡಿ ನೇತೃತ್ವದಲ್ಲಿ ಹೊಸ ಸರ್ಕಾರ ಉದಯವಾದ ಬಳಿಕ ಏಕನಾಥ್ ಶಿಂಧೆಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ದೊರೆಕಿದೆ. ನಗರಾಭಿವೃದ್ಧಿ ಹಾಗೂ ಮೂಲ ಸೌಕರ್ಯ ಇಲಾಖೆ ಸಚಿವರಾಗಿ ಶಿಂಧೆ ಪ್ರಸ್ತುತ ಕಾರ್ಯ ನಿರ್ವಹಿಸಿದ್ದಾರೆ.












Click it and Unblock the Notifications