ಹೋಟೆಲ್‌ಗೆ ದೌಡಾಯಿಸಿದ ಡಿಕೆಶಿ ಬಗ್ಗೆ ಅತೃಪ್ತರು ಹೇಳಿದ್ದೇನು?
Recommended Video
ಮುಂಬೈ, ಜುಲೈ 10: ಅತೃಪ್ತ ಶಾಸಕರಲ್ಲಿ ನಡುಕ ಹುಟ್ಟಿಸುವಂತೆ ಬೆಳ್ಳಂಬೆಳಗ್ಗೆ ಸಚಿವ ಡಿಕೆ ಶಿವಕುಮಾರ್ ಅವರು ಮುಂಬೈಯ ರಿನೈಸಾನ್ಸ್ ಹೊಟೇಲ್ ಗೆ ಬಂದಾಗಿದೆ.
ಆದರೆ ಪಟ್ಟು ಬಿಡದ ರೆಬೆಲ್ ಶಾಸಕರು ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ, "ಡಿಕೆ ಶಿವಕುಮಅರ್ ಅವರನ್ನು ಭೇಟಿ ಮಾಡಲು ನಮಗೆ ಆಸಕ್ತಿ ಇಲ್ಲ. ಅಷ್ಟಕ್ಕೂ ನಮ್ಮನ್ನು ಭೇಟಿ ಮಾಡಲು ಬಿಜೆಪಿಯ ಯಾರೂ ಇಲ್ಲಿಲ್ಲ" ಎಂದಿದ್ದಾರೆ.

ಶಾಸಕ ಬಿ ಬಸವರಾಜ್ ಮಾತನಾಡಿ, ನಮಗೆ ಡಿಕೆ ಶಿವಕುಮಾರ್ ಅವರಿಗೆ ಅವಮಾನ ಮಾಡುವ ಉದ್ದೇಶ ಖಂಡಿತ ಇಲ್ಲ. ನಮಗೆ ಅವರಲ್ಲಿ ನಂಬಿಕೆ ಇದೆ. ನಾವು ಈ ಹೆಜ್ಜೆ ಇಟ್ಟಿರುವುದಕ್ಕೆ ಬಲವಾದ ಕಾರಣವಿದೆ. ಸ್ನೇಹ, ಪ್ರೀತಿಯೇ ಬೇರೆ. ನಾವು ಅವರನ್ನು ಇಂದು ಭೇಟಿ ಮಾಡಲು ಏಕೆ ಒಪ್ಪುತ್ತಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವಂತೆ ಅವರಿಗೆ ಅತ್ಯಂತ ಗೌರವ ಮತ್ತು ವಿನಮೃವಾಗಿ ಕೇಳಿಕೊಳ್ಳುತ್ತೇವೆ ಎಂದಿದ್ದಾರೆ.
ಕರ್ನಾಟಕದ ಹದಿನಾಲ್ಕು ಅತೃಪ್ತ ಶಾಸಕರು ತಂಗಿರುವ ಮುಂಬೈಯ ರೆನೈಸಾನ್ಸ್ ಹೊಟೇಲ್ ನಲ್ಲಿಯೇ ಜಲ ಸಂಪನ್ಮೂಲ ಸಚಿವ, ಕಾಂಗ್ರೆಸ್ ನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರೂ ಎರಡು ರೂಂ ಬುಕ್ ಮಾಡಿದ್ದರು. ಆದರೆ ತುರ್ತು ಕಾರಣ ನೀಡಿ ಅವರ ಬುಕಿಂಗ್ ಅನ್ನು ಹೊಟೇಲ್ ಆಡಳಿತ ಮಂಡಳಿ ರದ್ದುಗೊಳಿಸಿದೆ. ಆದರೆ ಹೊಟೇಲ್ ಮುಂದೆಯೇ ನಿಂತಿರುವ ಡಿಕೆ ಶಿವಕುಮಾರ್, ತಾವು ಇಂದು ಸ್ನೇಹಿತರಾದ ಅತೃಪ್ತ ಶಾಸಕರನ್ನು ಭೇಟಿ ಮಾಡದೆ ಹಿಂದಿರುಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ!
"ನನ್ನ ಬಳಿ ಶಸ್ತ್ರಾಸ್ತ್ರವಿಲ್ಲ, ಹೃದಯವಿದೆ. ಹೊಟೇಲ್ ನಲ್ಲಿರುವವರು ನನ್ನ ಸ್ನೇಹಿತರು. ಹೆಣ್ಣು ಮಕ್ಕಳು ಮುನಿಸಿಕೊಂಡು ತವರು ಮನೆಗೆ ಹೋಗುವಂತೆ ಹೋಗಿದ್ದಾರೆ. ಅವರದು ಏನೆಲ್ಲ ಬೇಡಿಕೆ ಇದೆಯೋ ಈಡೇರಿಸೋಣ. ನಾನು ಅವರನ್ನು ಭೇಟಿ ಮಾಡಿ, ಕುಶಲ ವಿಚಾರಿಸಿ, ಕಾಫಿ ಕುಡಿದು ಬರುತ್ತೇನೆ" ಎಂದು ಡಿಕೆಶಿ ಹೇಳಿದ್ದಾರೆ.
ಈ ನಾಟಕೀಯ ಬೆಳವಣಿಗೆ ರಾಷ್ಟ್ರದ ಗಮನ ಸೆಳೆದು ರಾಜ್ಯ ರಾಜಕಾರಣ ಮತ್ತಷ್ಟು ಕುತೂಹಲದ ಘಟ್ಟ ತಲುಪಿದೆ.












Click it and Unblock the Notifications