ಕೊರೊನಾ ಲಸಿಕೆ ಪಡೆಯದಿದ್ದರೆ ಪಡಿತರ, ಗ್ಯಾಸ್, ಪೆಟ್ರೋಲ್ ಇಲ್ಲ
ಔರಂಗಾಬಾದ್, ನವೆಂಬರ್ 10: ಕೊರೊನಾ ಲಸಿಕೆ ಪಡೆಯದವರಿಗೆ ಪಡಿತರ, ಅಡುಗೆ ಅನಿಲ, ಪೆಟ್ರೋಲ್ ವಿತರಿಸದಂತೆ ಮಹರಾಷ್ಟ್ರದ ಔರಂಗಾಬಾದ್ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಈ ಆದೇಶವು ಮಂಗಳವಾರ ರಾತ್ರಿಯಿಂದಲೇ ಜಾರಿಗೆ ಬಂದಿದೆ. ನ್ಯಾಯ ಬೆಲೆ ಅಂಗಡಿ, ಗ್ಯಾಸ್ ಸಂಸ್ಥೆಗಳು ಹಾಗೂ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರು ಕೋವಿಡ್ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣ ಪತ್ರ ಪರಿಶೀಲಿಸಿ ನಂತರ ನೀಡಬೇಕು ಎಂದು ಮಾಲೀಕರಿಗೆ ಜಿಲ್ಲಾಧಿಕಾರಿ ಸುನಿಲ್ ಛವಾನ್ ನಿರ್ದೇಶನ ನೀಡಿದ್ದಾರೆ.
ವಿಶೇಷ ವರದಿ: ಭಾರತದಲ್ಲಿ ಡಿ.31ರೊಳಗೆ 94 ಕೋಟಿ ಜನರಿಗೆ ಸಿಗುತ್ತಾ ಕೊವಿಡ್-19 ಲಸಿಕೆ?
ಆದೇಶ ಪಾಲನೆಯಾಗದಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಕನಿಷ್ಠ ಪಕ್ಷ ಒಂದು ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಪಡಿತರ, ಅಡುಗೆ ಅನಿಲ, ಪೆಟ್ರೋಲ್ ಅನ್ನು ನೀಡುವಂತೆ ಸಂಬಂಧಪಟ್ಟ ಅಂಗಡಿಗಳ ಮಾಲೀಕರಿಗೆ ಸೂಚನೆ ನೀಡಿದೆ. ಕೋವಿಡ್ ಲಸಿಕೆ ನೀಡಿಕೆಯಲ್ಲಿ ಪ್ರಗತಿ ಸಾಧಿಸಿದ 36 ಜಿಲ್ಲೆಗಳ ಪೈಕಿ ಔರಂಗಾಬಾದ್ 26ನೇ ಸ್ಥಾನ ಪಡೆದಿದೆ.
ಮಹಾರಾಷ್ಟ್ರದಲ್ಲಿ ಈವರೆಗೆ ಶೇ. 74ರಷ್ಟು ಲಸಿಕೆ ನೀಡಲಾಗಿದ್ದು, ಔರಂಗಾಬಾದ್ ಜಿಲ್ಲೆಯಲ್ಲಿ ಶೇ. 55 ಆಗಿದೆ. ಕೋವಿಡ್ ಲಸಿಕೆ ಪಡೆಯದಿದ್ದರೆ ಐತಿಹಾಸಿಕ ತಾಣಗಳಿಗೆ ಪ್ರವಾಸ ಕೈಗೊಳ್ಳಲು ಅನುಮತಿ ನೀಡುವುದಿಲ್ಲ ಎಂದು ಈ ಹಿಂದೆಯೂ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಎಷ್ಟೋ ಮಂದಿ ಬೆಳಿಗ್ಗೆಯಿಂದ ಸಂಜೆವರೆಗೂ ಜಮೀನುಗಳಲ್ಲಿ ಕೆಲಸ ಮಾಡುವವರಿದ್ದಾರೆ. ಅಂತಹವರಿಗೆ ಸಂಜೆ 5ರಿಂದ ರಾತ್ರಿ 8 ಗಂಟೆವರೆಗೆ ಲಸಿಕೆ ನೀಡಲಾಗುವುದು ಎಂದು ಜಿಲ್ಲಾ ಪರಿಷತ್ ತಿಳಿಸಿದೆ.
ಅಡುಗೆ ಅನಿಲ ಬೆಲೆ ಏರಿಕೆ:ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 266 ರೂ.ಯಷ್ಟು ಹೆಚ್ಚಾಗಿದೆ. ಈ ಹೆಚ್ಚಳವು ಕಮರ್ಷಿಯಲ್ ಸಿಲಿಂಡರ್‌ಗಳ ಮೇಲೆ ಅನ್ವಯವಾಗಲಿದೆ.
ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿಯೂ ಬೆಲೆ ಏರಿಕೆ : ಈ ಹಿಂದೆ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಕೂಡ ಪೆಟ್ರೋಲಿಯಂ ಕಂಪನಿಗಳು ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿದ್ದವು.
19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಸೆಪ್ಟೆಂಬರ್ 1 ರಂದು 43 ರೂ ಮತ್ತು ಅಕ್ಟೋಬರ್ 1 ರಂದು 75 ರೂ ಹೆಚ್ಚಿಸಲಾಗಿತ್ತು. ಕಳೆದ ತಿಂಗಳು, ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಹೆಚ್ಚಳವಾಗಿತ್ತು.
ದೆಹಲಿಯಲ್ಲಿ ಸಿಲಿಂಡರ್ ಬೆಲೆ 1998 ರೂ. ಏರಿಕೆ : 266 ರೂಪಾಯಿ ಹೆಚ್ಚಳದ ನಂತರ ದೆಹಲಿಯಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 1998 ರೂ.ಗೆ ಏರಿದೆ. ಇದಕ್ಕೂ ಮೊದಲು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ (LPG Price) 1733 ರೂಪಾಯಿ ಇತ್ತು. ಮುಂಬೈನಲ್ಲಿ 19 ಕೆ.ಜಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 1950 ರೂ.ಆಗಿದೆ. ಕೋಲ್ಕತ್ತಾದಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್ 2073.50 ರೂ ಆಗಿದ್ದರೆ, ಚೆನ್ನೈನಲ್ಲಿ 19 ಕೆಜಿ ಸಿಲಿಂಡರ್ 2133 ರೂ.ಗೆ ಲಭ್ಯವಾಗಲಿದೆ.
ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಕೇಂದ್ರದ ಅಬಕಾರಿ ಸುಂಕ ಕಡಿತ ಮತ್ತು 20ಕ್ಕೂ ಹೆಚ್ಚು ರಾಜ್ಯಗಳು ಕಡಿತಗೊಳಿಸಿರುವ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮಧ್ಯೆ ದೇಶದಾದ್ಯಂತ ಸತತ 7ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ವಾರ ಕೇಂದ್ರ ಸರ್ಕಾರ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು.
ಪ್ರತಿ ಲೀಟರ್ ಪೆಟ್ರೋಲ್ ಮೇಲೆ 5 ರೂ. ಮತ್ತು ಡೀಸೆಲ್ ಮೇಲೆ 10 ರೂ.ನಷ್ಟು ಕಡಿಮೆ ಮಾಡಿತ್ತು. ಬೆಲೆ ಕಡಿತದ ನಂತರ ಪೆಟ್ರೋಲ್ ಬೆಲೆ ಬಹುತೇಕ ಭಾಗದಲ್ಲಿ ಲೀಟರ್‌ಗೆ ರೂ 100 ರೂ.ಗಿಂತ ಕಡಿಮೆಯಾಗಿದೆ. ಆಡಳಿತಾರೂಢ ಬಿಜೆಪಿ ಸೇರಿದಂತೆ ಕೆಲವು ರಾಜ್ಯಗಳು ಇಂಧನ ದರದ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸಿವೆ.
ತೈಲ ಕಂಪನಿಗಳು ಅಳವಡಿಸಿಕೊಂಡ ಬೆಲೆ ಸೂತ್ರದ ಪ್ರಕಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್( BPCL ), ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ( HPCL)ಅಂತಾರಾಷ್ಟ್ರೀಯ ಬೆಲೆ ಮತ್ತು ವಿದೇಶಿ ವಿನಿಮಯ ದರಗಳಿಗೆ ಅನುಗುಣವಾಗಿ ಇಂಧನ ಬೆಲೆಯನ್ನು ಪ್ರತಿದಿನ ಪರಿಷ್ಕರಿಸುತ್ತವೆ. ಪ್ರಸ್ತುತ ದೇಶದ 4 ಮೆಟ್ರೋ ನಗರಗಳಲ್ಲಿ ಇಂಧನ ದರ ಅತ್ಯಧಿಕವಾಗಿದೆ.