ಈಡೇರಿಸಲಾಗುವ ಕನಸು ಮಾತ್ರ ತೋರಿಸಿ: ಗಡ್ಕರಿ ಮಾತು ಮೋದಿಗೆ ಹೇಳಿದ್ದಂತೆ!
Recommended Video

ಮುಂಬೈ, ಜನವರಿ 28: ನರೇಂದ್ರ ಮೋದಿ ಅವರ ನಂತರ ಬಿಜೆಪಿಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ನಿತಿನ್ ಗಡ್ಕರಿ ಅವರ ಹೆಸರು ಕೆಲವು ತಿಂಗಳಿನಿಂದ ಕೇಳಿಬರುತ್ತಿದೆ. ಈ ಬಗ್ಗೆ ಬಿಜೆಪಿಯಲ್ಲಿ ಬಹಿರಂಗವಾಗಿ ಚರ್ಚೆಯಾಗುತ್ತಿಲ್ಲ. ಆದರೆ, ಗಡ್ಕರಿ ಅವರ ಮಾತುಗಳಲ್ಲಿ ಪರೋಕ್ಷವಾಗಿ ಈ ಇಂಗಿತವೂ ವ್ಯಕ್ತವಾಗುತ್ತಿದೆ ಎಂಬ ವಿಶ್ಲೇಷಣೆಗಳಿವೆ.
ಪ್ರಧಾನಿ ನರೇಂದ್ರ ಮೋದಿ ಅವರ ಸ್ಥಾನ ತೆರವಾಗಿ ಅದನ್ನು ತಾವು ಅಲಂಕರಿಸುವ ವಿಚಾರಗಳನ್ನು ಗಡ್ಕರಿ ನಿರಾಕರಿಸಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಮಾಜಿ ಮುಖಂಡರೊಬ್ಬರ ಪತ್ರ ಈ ಎಲ್ಲ ಗಾಳಿಸುದ್ದಿಗಳು ಬಲಗೊಳ್ಳಲು ಕಾರಣವಾಗಿತ್ತು.
ವಸಂತರಾವ್ ನಾಯ್ಕ್ ಶೇಟಿ ಸ್ವಾವಲಂಬನ್ ಮಿಷನ್‌ನ ಮುಖ್ಯಸ್ಥ ಕಿಶೋರ್ ತಿವಾರಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ಭಯ್ಯಾಜಿ ಸುರೇಶ್ ಜೋಶಿ ಅವರಿಗೆ ಬರೆದಿದ್ದ ಪತ್ರದಲ್ಲಿ ಗಡ್ಕರಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿರಿಸಿಕೊಂಡು ಚುನಾವಣೆ ಎದುರಿಸುವಂತೆ ಪತ್ರಬರೆದಿದ್ದರು.
ಅದಕ್ಕೆ ಇತ್ತೀಚಿಗೆ ಅವರು ಬಿಜೆಪಿ ನಾಯಕರನ್ನು ಉದ್ದೇಶಿಸಿ ನೀಡಿದ್ದ ಕೆಲವು ಹೇಳಿಕೆಗಳು ಪುರಾವೆಯಂತಿದ್ದವು. ಈಗ ಮತ್ತೊಂದು ತಾಜಾ ಉದಾಹರಣೆ ದೊರಕಿದೆ. ಗಡ್ಕರಿ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಅದು ಮೋದಿ ಅವರಿಗೇ ಹೇಳಿದ್ದು ಎಂದು ಅವರ ವಿರೋಧಿಗಳು ಗೇಲಿ ಮಾಡುತ್ತಿದ್ದಾರೆ.

ಈಡೇರಿಸುವ ಕನಸು ಕಾಣಿ
ಗಣರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ್ದ ನಿತಿನ್ ಗಡ್ಕರಿ, ಕನಸುಗಳನ್ನು ಹೆಣೆಯುವುದು ರಾಜಕೀಯ ನಾಯಕರಿಗೆ ಇಷ್ಟ. ಆದರೆ, ಅದನ್ನು ಈಡೇರಿಸಲು ಅವರಿಗೆ ಸಾಧ್ಯವಾಗದೆ ಇದ್ದರೆ ಜನರಿಂದ ಹೊಡೆತ ತಿನ್ನಬೇಕಾಗುತ್ತದೆ. ಹೀಗಾಗಿ ಸಾಧ್ಯವಾಗುವ ಭರವಸೆಗಳನ್ನು ಮಾತ್ರ ನೀಡಿ ಎಂದು ಹೇಳಿದ್ದರು.
ನಾನು ಕನಸುಗಳನ್ನು ಬಿತ್ತುವವನಲ್ಲ. ನಾನು ಹೇಳಿದ್ದೆಲ್ಲವೂ ಶೇ 100ರಷ್ಟು ಅಧಿಕೃತವಾಗಿರುತ್ತದೆ ಎಂದು ಗಡ್ಕರಿ ಹೇಳಿದ್ದರು.

ಮೋದಿ ಜೀ ಜನ ಬರುತ್ತಿದ್ದಾರೆ...
'ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೋದಿ ಜೀ, ಜನರು ಬರುತ್ತಿದ್ದಾರೆ' ಎಂದು ಮಧ್ಯಪ್ರದೇಶ ಕಾಂಗ್ರೆಸ್, ಗಡ್ಕರಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಮೋದಿ ಅವರನ್ನು ಲೇವಡಿ ಮಾಡಿದೆ.
|
ಕನ್ನಡಿ ಹಿಡಿದಿದ್ದಾರೆ
ಗಡ್ಕರಿ ಅವರ ಹೇಳಿಕೆಯಿರುವ ಟ್ವೀಟ್ ಅನ್ನು ಉಲ್ಲೇಖಿಸಿರುವ ಎಐಎಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಪ್ರಧಾನಿ ಕಚೇರಿಯನ್ನು ಟ್ಯಾಗ್ ಮಾಡಿ 'ನಿತಿನ್ ಗಡ್ಕರಿ ಅವರು ನಿಮಗೆ ಕನ್ನಡಿಯನ್ನು ತೋರಿಸುತ್ತಿದ್ದಾರೆ. ಅದು ಸೂಕ್ಷ್ಮವಾದ ರೀತಿಯಲ್ಲಿ...' ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

ಒಪ್ಪಿಕೊಳ್ಳುವ ಗುಣ ಇರಬೇಕು
'ಸೋಲು ಮತ್ತು ವೈಫಲ್ಯಗಳನ್ನು ಒಪ್ಪಿಕೊಳ್ಳುವ ಗುಣ ನಾಯಕತ್ವದಲ್ಲಿ ಇರಬೇಕು. ಸೋಲಿಗೆ ಹೊಣೆಗಾರಿಕೆ ಹೊತ್ತುಕೊಳ್ಳುವ ಸಮಯದವರೆಗೂ ನಾಯಕತ್ವದೆಡೆಗಿನ ನಿಷ್ಠೆ ಸಾಬೀತಾಗುವುದಿಲ್ಲ' ಎಂದು ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ ಸೋಲಿನ ಬಳಿಕ ನಿತಿನ್ ಗಡ್ಕರಿ ಹೇಳಿದ್ದರು.

ಗಡ್ಕರಿಯಾದರೆ ಬೆಂಬಲ
ಚುನಾವಣೆ ಬಳಿಕ ನರೇಂದ್ರ ಮೋದಿ ಅವರ ಬದಲು ಪ್ರಧಾನಿಯನ್ನಾಗಿ ಗಡ್ಕರಿ ಅವರಿಗೆ ಜವಾಬ್ದಾರಿ ನೀಡುವುದಾದರೆ ಬೆಂಬಲ ಕೊಡುವುದಾಗಿ ಶಿವಸೇನಾ ಹೇಳಿರುವುದಾಗಿ ವರದಿಯಾಗಿತ್ತು.
ಆರೆಸ್ಸೆಸ್‌ಗೆ ಮಾಜಿ ಮುಖಂಡ ಕಿಶೋರ್ ತಿವಾರಿ ಬರೆದಿದ್ದ ಪತ್ರದಲ್ಲಿ, 'ಪಕ್ಷ ಮತ್ತು ಸರ್ಕಾರದಲ್ಲಿ ಉಗ್ರ ಮತ್ತು ಸರ್ವಾಧಿಕಾರಿ ಧೋರಣೆ ಹೊಂದಿರುವ ನಾಯಕರು ಸಮಾಜ ಹಾಗೂ ದೇಶಕ್ಕೆ ಅಪಾಯಕಾರಿ. ಇದನ್ನು ನಾವು ಹಿಂದೆಯೂ ನೋಡಿದ್ದೆವು. ಇತಿಹಾಸ ಮರುಕಳಿಸಬಾರದು ಎಂದಿದ್ದರೆ 2019ರ ಚುನಾವಣೆಯಲ್ಲಿ ಅಧಿಖಾರವನ್ನು ನಿತಿನ್ ಗಡ್ಕರಿ ಅವರಿಗೆ ಹಸ್ತಾಂತರಿಸಿ' ಎಂದು ಸಲಹೆ ನೀಡಿದ್ದರು.












Click it and Unblock the Notifications