ಮುಂಬೈ ಕಳ್ಳಭಟ್ಟಿ ದುರಂತ, ನೂರಕ್ಕೇರಿದ ಸಾವಿನ ಸಂಖ್ಯೆ
ಮುಂಬೈ, ಜೂ.22: ಇಲ್ಲಿನ ಮಲಾಡ್ ಪ್ರದೇಶದಲ್ಲಿ ಕಳ್ಳಭಟ್ಟಿ ದುರಂತಕ್ಕೆ ಬಲಿಯಾದವರ ಸಂಖ್ಯೆ ನೂರು ದಾಟಿದೆ. ಕೊನೆಗೂ ಎಚ್ಚೆತ್ತುಕೊಂಡಿರುವ ಮುಂಬೈ ಪೊಲೀಸರು ಕಳ್ಳಭಟ್ಟಿ ಅಡ್ಡಾಗಳ ಮೇಲೆ ತೀವ್ರ ದಾಳಿ ನಡೆಸಿದ್ದಾರೆ.
ಮಲಾಡ್ ಉಪನಗರದ ಮಾಲ್ವಾನಿಯಾ ಲಕ್ಷ್ಮೀನಗರದ ಕೊಳಗೇರಿಯಲ್ಲಿ ಕಳ್ಳಭಟ್ಟಿ ಸೇವಿಸಿ 100ಜನ ಮೃತಪಟ್ಟಿದ್ದರೆ, 45ಜನರು ಅಸ್ವಸ್ಥಗೊಂಡು ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳು ಕಂಡು ಬಂದಿವೆ. [ಕಳ್ಳಭಟ್ಟಿ : ಸಲ್ಲದ ಕಾಯಿದೆ ನಿಲ್ಲದ ದಂಧೆ]

ಮಹಾರಾಷ್ಟ್ರ ಸರ್ಕಾರ ಈಗಾಗಲೇ ನಾಲ್ವರು ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ ವಿಚಾರಣೆಗೆ ಆದೇಶಿಸಿದೆ. ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಕಾರಣ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆಯ ಆಯುಕ್ತ ಶ್ಯಾಂಸುಂದರ ಶಿಂಧೆ ತಿಳಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಮೈಂಕಾಬಾಯಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಜಾಲ ಬೀಸಲಾಗಿದೆ.
2005ರ ಡಿಸೆಂಬರ್‌ನಲ್ಲಿ ವಿಕ್ರೋಲಿ ಉಪನಗರದಲ್ಲಿ ಕಳ್ಳಭಟ್ಟಿ ಸೇವಿಸಿ 87 ಮಂದಿ ಸಾವನ್ನಪ್ಪಿದ್ದರು. ಈ ಸಲದ ವಿಷ ಮದ್ಯ ದುರಂತ ಅದಕ್ಕಿಂತಲೂ ತೀವ್ರವಾಗಿದೆ ಎಂದು ಮುಂಬೈಯ ಪೊಲೀಸ್ ಉಪಾಯುಕ್ತ ಧನಂಜಯ ಕುಲಕರ್ಣಿ ತಿಳಿಸಿದ್ದಾರೆ.












Click it and Unblock the Notifications