ಮಹೇಶ್ ಭಟ್ ಕುಟುಂಬಕ್ಕೆ ಕೊಲೆ ಬೆದರಿಕೆ, ಆರೋಪಿ ಬಂಧನ
ಮುಂಬೈ, ಮಾರ್ಚ್ 2 : 'ಹಿಲ್ ಹೈ ಕೆ ಮಾನತಾ ನಹಿ' ಚಿತ್ರದ ಖ್ಯಾತಿಯ ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಅವರಿಗೆ ಕರೆ ಮಾಡಿ ಆಲಿಯಾ ಭಟ್ ಮತ್ತು ಪತ್ನಿ ಸೋನಿ ರಾಜ್ದಾನ್ ರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದ ಸಂದೀಪ್ ಸಹು ಎಂಬ ೨೭ ವರ್ಷದ ವ್ಯಕ್ತಿಯನ್ನು ಬಂಧಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ.
ಫೆಬ್ರವರಿ 26ರಂದು ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಅವರಿಗೆ ಕರೆ ಮಾಡಿದ ಅನಾಮಿಕ ವ್ಯಕ್ತಿಯೊಬ್ಬ ತಾನು ಗ್ಯಾಂಗ್ ಲೀಡರ್ ಎಂದೂ, ತನಗೆ 50 ಲಕ್ಷ ರೂಪಾಯಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದ. ಈ ಹಣವನ್ನು ನೀಡದೇ ಇದ್ದಲ್ಲಿ ಅವರ ಪುತ್ರಿ, 'ಉಡ್ತಾ ಪಂಜಾಬ್' ಚಿತ್ರಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಬಾಲಿವುಡ್ ನಟಿ ಆಲಿಯಾ ಭಟ್ ಮತ್ತು ಪತ್ನಿ ಸೋನಿ ರಾಜ್ದಾನ್ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದ.[ಮಂಗಳೂರಿನಲ್ಲಿ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಸಹಚರರ ಬಂಧನ]

ಈ ವಿಷಯವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸದ ಮಹೇಶ್ ಭಟ್ ಅವರ ವಾಟ್ಸ್ ಆಪ್ ನಂಬರ್ ಗೆ ಈ ವ್ಯಕ್ತಿ ಮತ್ತೊಮ್ಮೆ ಮೆಸೇಜ್ ಮಾಡಿದ್ದ. ನನ್ನ ಕರೆಯನ್ನು ಹಗುರವಾಗಿ ಪರಿಗಣಿಸಬೇಡಿ. ಹಣ ನೀಡದೇ ಇದ್ದಲ್ಲಿ ನಿಮ್ಮ ಮಗಳು, ಮತ್ತು ಪತ್ನಿಯ ಮೇಲೆ ಗುಂಡಿನ ಸುರಿಮಳೆಯಾಗುವುದು ಖಂಡಿತ ಎಂಬ ಎಚ್ಚರಿಕೆ ನೀಡಿದ್ದ.
ಇದರಿಂದ ಕೊಂಚ ಭಯಗೊಂಡ ಭಟ್ ಫ್ಯಾಮಿಲಿ ಇಲ್ಲಿನ ಜುಹು ಠಾಣೆಯಲ್ಲಿ ದೂರು ನೀಡಿತ್ತು. ಕರೆ ಮಾಡಿದ ನಂಬರ್ ಮತ್ತು ವಾಟ್ಸ್ ಆಪ್ ಸಂದೇಶದ ಆಧಾರದ ಮೇಲೆ ಅಪರಾಧಿಯನ್ನು ಪತ್ತೆ ಮಾಡಿದ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 387ರ ಅಡಿಯಲ್ಲಿ ಸುಲಿಗೆ ಪ್ರಕರಣದಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.[ಭಾರತದಲ್ಲೇ ಮಣ್ಣಾಗಲು ಬಯಸುತ್ತಿದ್ದಾನಾ ದಾವೂದ್ ಇಬ್ರಾಹಿಂ?]
ಸುಲಿಗೆಗಾಗಿ ನನ್ನ ಕುಟುಂಬಕ್ಕೆ ಕೊಲೆ ಬೆದರಿಕೆ ಒಡ್ಡಿದ ಪ್ರಕರಣವನ್ನು ಇನ್ನೂ ಮೊಗ್ಗಿರುವಾಗಲೇ ಪರಿಹರಿಸಲಾಗಿದೆ. ಈ ಕಾರಣಕ್ಕಾಗಿ ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದ ಪೊಲೀಸರಿಗೆ ನಾನು ಋಣಿಯಾಗಿರುತ್ತೇನೆ ಎಂದು ಮಹೇಶ್ ಭಟ್ ಟ್ವೀಟ್ ಸಹ ಮಾಡಿದ್ದಾರೆ.












Click it and Unblock the Notifications