ಕುಡಿಯಲು ಬಾರ್‌ಗೆ ಹೋಗ್ಬೇಕಿಲ್ಲ; ಆರ್ಡರ್ ಮಾಡಿದರೆ ಮನೆ ಬಾಗಿಲಿಗೇ ಬರುತ್ತದೆ 'ಎಣ್ಣೆ'
Recommended Video

ನಾಗ್ಪುರ, ಅಕ್ಟೋಬರ್ 14: ಕುಡಿತ ಮಿತಿಮೀರಿ ಮನೆಗೆ ಬರುವ ದಾರಿಯೇ ತಪ್ಪುವುದು, ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತ ಮಾಡುವುದು, ಹೆಂಡತಿ ಬಾಗಿಲು ತೆರೆದಿಲ್ಲವೆಂದರೆ ಗಲಾಟೆ ಮಾಡುವುದು... ಈ ಎಲ್ಲ ಸಂಕಷ್ಟಗಳ ಉಸಾಬರಿ ಗಂಡಸರಿಗೆ ಬೇಡ ಎಂದು ಮಹಾರಾಷ್ಟ್ರ ಸರ್ಕಾರ ಹೊಸ ಐಡಿಯಾ ಮಾಡಿದೆ.
ಮನೆ ಬಾಗಿಲಿಗೇ ಮದ್ಯ ಪೂರೈಕೆ ಮಾಡುವ ಹೊಸ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆಸಿರುವುದಾಗಿ ಅಲ್ಲಿನ ಅಬಕಾರಿ ಸಚಿವ ಚಂದ್ರಶೇಖರ ಬವಂಕುಲೆ ಹೇಳಿದ್ದಾರೆ.
ಈ ಮೂಲಕ ಮಹಾರಾಷ್ಟ್ರ ಇಂತಹ ನೀತಿಯನ್ನು ಅಳವಡಿಸಿಕೊಳ್ಳುವ ದೇಶದ ಮೊದಲ ರಾಜ್ಯ ಎಂದೆನಿಸಿದೆ.

ಆದರೆ, ಅವರ ಹೇಳಿಕೆಗೆ ಸಾಮಾಜಿಕ ಕಾರ್ಯಕರ್ತರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವ ಬವಂಕುಲೆ ಯೂಟರ್ನ್ ತೆಗೆದುಕೊಂಡಿದ್ದಾರೆ. ಹೀಗಾಗಿ ಅಲ್ಲಿನ ಮದ್ಯಪ್ರಿಯರಲ್ಲಿ ಮೂಡಿದ್ದ ಉತ್ಸಾಹದ ನಶೆ ಜರ್ರನೆ ಇಳಿದುಹೋಗಿದೆ.
ಮದ್ಯದ ಆನ್‌ಲೈನ್ ಮಾರಾಟ ಮತ್ತು ಮನೆಗೆ ಪೂರೈಕೆ ಸೇವೆಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಹಲವು ಅರ್ಜಿಗಳು ಬಂದಿದ್ದವು. ಮನೆ ಮನೆಗೆ ಮದ್ಯ ಪೂರೈಕೆ ಮಾಡುವ ಸಲುವಾಗಿಯೇ ವಾಟ್ಸ್‌ಆಪ್ ಗ್ರೂಪ್ ರಚಿಸಿಕೊಂಡಿದ್ದ ವ್ಯಕ್ತಿಯೊಬ್ಬನ ವಿರುದ್ಧ ಕ್ರಮ ತೆಗೆದುಕೊಂಡ ಬಳಿಕ ಈ ರೀತಿಯ ಅರ್ಜಿಗಳು ಬಂದಿದ್ದವು. ಆದರೆ, ಇದುವರೆಗೂ ಈ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ. ಇದರಿಂದ ಭಾರಿ ಪ್ರಮಾಣದ ಸಾವು ನೋವು ಸಂಭವಿಸುತ್ತವೆ. ಇಂತಹ ಪ್ರಕರಣಗಳನ್ನು ತಗ್ಗಿಸುವುದೇ ಮನೆಗೆ ಮದ್ಯಪೂರೈಕೆ ಯೋಜನೆಯ ಮುಖ್ಯ ಉದ್ದೇಶ ಎಂದು ಸಚಿವರು ಹೇಳಿದ್ದರು.
ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಇ-ಕಾಮರ್ಸ್ ವೆಬ್‌ಸೈಟ್‌ಗಳ ಮಾದರಿಯಲ್ಲಿ ಜನರು ದಿನಸಿ ಮತ್ತು ತರಕಾರಿಗಳನ್ನು ತರಿಸಿಕೊಳ್ಳುವಂತೆ ಮನೆಗಳಿಗೆ ಆಲ್ಕೊಹಾಲ್‌ಅನ್ನು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದ್ದರು.












Click it and Unblock the Notifications