'ಮಹಾ' ಉದ್ಧವ್ ಸರ್ಕಾರಕ್ಕೆ ಆಘಾತ: ಮಹಾವಿಕಾಸ್ ಅಘಾಡಿ ಮೈತ್ರಿಕೂಟ ಇಬ್ಭಾಗ
ಮುಂಬೈ ಏಪ್ರಿಲ್ 6: ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳ 'ಮಹಾವಿಕಾಸ ಆಘಾಡಿ' ಸರಕಾರದಲ್ಲಿ ಕಾಣಿಸಿರುವ ಭಿನ್ನಾಭಿಪ್ರಾಯದ ಬಿರುಕು ಮತ್ತಷ್ಟು ಹೆಚ್ಚಿದೆ. ಪರಸ್ಪರ ಕಾಲೆಳೆಯುವ ಕಾಯಕವನ್ನು ಮೈತ್ರಿ ಸರಕಾರದ ನಾಯಕರು ಮುಂದುವರಿಸಿದ್ದಾರೆ. ಈ ನಡುವೆ ಉದ್ಧವ್ ಠಾಕ್ರೆ ಸರ್ಕಾರಕ್ಕೆ ಭಾರಿ ಅಘಾತವಾಗಿದೆ. ಮಹಾ ವಿಕಾಸ ಅಘಾಡಿ ಮೈತ್ರಿಕೂಟದ ಭಾಗವಾಗಿರುವ ಸ್ವಾಭಿಮಾನಿ ಪಕ್ಷವು ಇನ್ನು ಮುಂದೆ ಈ ಮೈತ್ರಿಕೂಟದ ಭಾಗವಾಗಿರುವುದಿಲ್ಲ ಎಂದು ಘೋಷಿಸಿದೆ.
ಸ್ವಾಭಿಮಾನ ಪಕ್ಷದ ಮುಖಂಡ ರಾಜು ಶೆಟ್ಟಿ ಅವರು ಮಂಗಳವಾರ ನಡೆದ ತಮ್ಮ ಪಕ್ಷದ ಸಮಾವೇಶದಲ್ಲಿ ಮೈತ್ರಿ ಮುರಿದುಕೊಳ್ಳುವುದಾಗಿ ಘೋಷಿಸಿದ್ದಾರೆ. ಜೊತೆಗೆ ಪಕ್ಷದ ಮುಖಂಡರೊಂದಿಗೆ ಸುದೀರ್ಘ ಚರ್ಚೆ ನಡೆಸಿ ಈ ಮೈತ್ರಿಯಿಂದ ಹೊರಬರಲು ನಿರ್ಧರಿಸಿದ್ದೇವೆ ಎಂದರು. ಹೀಗಾಗಿ ರಾಜು ಶೆಟ್ಟಿ ಹೇಳಿಕೆಯಂತೆ ಸ್ವಾಭಿಮಾನಿ ಪಕ್ಷ ಮತ್ತು ಮಹಾವಿಕಾಸ ಅಘಾಡಿ ನಡುವೆ ಇಂದಿನಿಂದ ಯಾವುದೇ ರೀತಿಯ ಸಂಬಂಧವಿರುವುದಿಲ್ಲ.

ಉದ್ಧವ್ ಠಾಕ್ರೆ ಸರ್ಕಾರದ ವಿರುದ್ಧ ರಾಜು ಶೆಟ್ಟಿ ಆರೋಪ
ರೈತರಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯದಲ್ಲೂ ಮಹಾರಾಷ್ಟ್ರದ ಉದ್ಧವ್ ಸರ್ಕಾರ ವಿಫಲವಾಗಿದೆ ಎಂದು ರಾಜು ಶೆಟ್ಟಿ ದೂರಿದ್ದಾರೆ. ತಮ್ಮ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ರಾಜು ಶೆಟ್ಟಿ, 'ಮಹಾರಾಷ್ಟ್ರದ ಉದ್ಧವ್ ಸರ್ಕಾರ ರೈತರಿಗೆ ಸಂಬಂಧಿಸಿದ ಪ್ರತಿಯೊಂದು ವಿಷಯದಲ್ಲೂ ವಿಫಲವಾಗಿದೆ ಎಂದು ಸಾಬೀತಾಗಿದೆ. ಈ ಕಾರಣಕ್ಕಾಗಿ ಇಂದು ನಾನು ಮಹಾವಿಕಾಸ್ ಅಘಾಡಿಯೊಂದಿಗೆ ಇನ್ನು ಮುಂದೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ಘೋಷಿಸುತ್ತೇನೆ. ಮೈತ್ರಿಯಿಂದ ಬೇರ್ಪಟ್ಟ ನಂತರ ರೈತರ ಬಳಿಗೆ ತೆರಳಿ ಮಾತುಕತೆ ನಡೆಸಿ ನಮ್ಮ ನಿರ್ಧಾರ ತಿಳಿಸುತ್ತೇನೆ' ಎಂದಿದ್ದಾರೆ.

ಎಂಎಲ್‌ಸಿ ಮಾಡಲು ರಾಜು ಶೆಟ್ಟಿ ಹೆಸರು
ದೇವಪ್ಪ ಅಣ್ಣಾ ಶೆಟ್ಟಿ ಅಲಿಯಾಸ್ ರಾಜು ಶೆಟ್ಟಿ ಜಿಲ್ಲಾ ಪರಿಷತ್ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದರು. ಬಳಿಕ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಶಾಸಕ (ಎಂಎಲ್‌ಸಿ) ಮಾಡಲು ರಾಜ್ಯಪಾಲರು ಶಿಫಾರಸು ಮಾಡಿರುವ 12 ಮಂದಿಯಲ್ಲಿ ರಾಜು ಶೆಟ್ಟಿ ಅವರ ಹೆಸರೂ ಇದೆ. ಮಂಗಳವಾರ ನಡೆದ ಪಕ್ಷದ ಸಮಾವೇಶದಲ್ಲಿ ರಾಜು ಶೆಟ್ಟಿ ಅವರು ತಮ್ಮ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವಂತೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರನ್ನು ಕೋರುವುದಾಗಿ ತಿಳಿಸಿದರು.

ಅತಿವೃಷ್ಟಿಯಿಂದ ರೈತ ಕಂಗಾಲು
ಮಂಗಳವಾರ ನಡೆದ ಪಕ್ಷದ ಸಮಾವೇಶದಲ್ಲಿ ರಾಜು ಶೆಟ್ಟಿ ಮಾತನಾಡಿ, 'ಕಳೆದ ಎರಡೂವರೆ ವರ್ಷಗಳ ಆಡಳಿತದಲ್ಲಿ ಅತಿವೃಷ್ಟಿಯಿಂದ ಆಗಿರುವ ಹಾನಿಗೆ ರೈತರಿಗೆ ನ್ಯಾಯಯುತ ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಬೇಕಾಗಿದೆ. ರೈತರ ಭೂಸ್ವಾಧೀನಕ್ಕೆ ಬದಲಾಗಿ ಸರ್ಕಾರ ಪರಿಹಾರದ ಮೊತ್ತವನ್ನು ಕಡಿತಗೊಳಿಸಿತು ಮತ್ತು ಅದಕ್ಕಾಗಿ ನಮ್ಮ ಪಕ್ಷವು ಬೀದಿಗಿಳಿಯಿತು' ಎಂದಿದ್ದಾರೆ.

ಎನ್‌ಸಿಪಿ ನಾಯಕರೊಂದಿಗೆ ಸಂಪರ್ಕ
ರಾಜು ಶೆಟ್ಟಿ ಅವರು ಇತ್ತೀಚೆಗೆ ತಮ್ಮ ಪಕ್ಷದ ಏಕೈಕ ಶಾಸಕ ದೇವೇಂದ್ರ ಭೂಯಾರ್ ಅವರನ್ನು 'ಸ್ವಾಭಿಮಾನಿ ಪಕ್ಷ'ದಿಂದ ಉಚ್ಛಾಟಿಸಿದ್ದರು. ದೇವೇಂದ್ರ ಭುಯಾರ್ ಅವರು 2019 ರ ವಿಧಾನಸಭಾ ಚುನಾವಣೆಯಿಂದ ಎನ್‌ಸಿಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಸ್ವಾಭಿಮಾನಿ ಪಕ್ಷದ ವೇದಿಕೆಯಲ್ಲಿ ಎಂದಿಗೂ ಕಾಣಿಸಿಕೊಂಡಿಲ್ಲ. ಆದ್ದರಿಂದ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ ಎಂದು ರಾಜು ಶೆಟ್ಟಿ ಹೇಳಿದರು. 2019 ರ ವಿಧಾನಸಭಾ ಚುನಾವಣೆಯಲ್ಲಿ, ದೇವೇಂದ್ರ ಭುಯಾರ್ ಅವರು ಸ್ವಾಭಿಮಾನಿ ಪಕ್ಷದ ಟಿಕೆಟ್‌ನಲ್ಲಿ ಮಹಾರಾಷ್ಟ್ರದ ಮೋರ್ಶಿ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದರು.












Click it and Unblock the Notifications