ರಾಹುಲ್ ಗಾಂಧಿಗೆ ಬಾಂಬ್ ಕಟ್ಟಿ ಬೇರೆ ದೇಶಕ್ಕೆ ಎಸೆಯಬೇಕು: ಪಂಕಜಾ ಮುಂಡೆ ವಿವಾದ
Recommended Video
ಮುಂಬೈ, ಏಪ್ರಿಲ್ 22: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬಾಂಬ್ ಕಟ್ಟಿ ಬೇರೆ ದೇಶಕ್ಕೆ ಕಳುಹಿಸಬೇಕು ಎನ್ನುವ ಮೂಲಕ ಮಹಾರಾಷ್ಟ್ರ ಬಿಜೆಪಿ ಸರ್ಕಾರದ ಸಚಿವೆ ಪಂಕಜಾ ಮುಂಡೆ ವಿವಾದ ಸೃಷ್ಟಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸರ್ಜಿಕಲ್ ದಾಳಿಯ ಬಗ್ಗೆ ಪದೇ ಪದೇ ಸಾಕ್ಷ್ಯ ಕೇಳುವ ಕಾಂಗ್ರೆಸ್ ಮತ್ತು ವಿರೋಧಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸುವ ಸಂದರ್ಭದಲ್ಲಿ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
'ಅವರು ಸರ್ಜಿಕಲ್ ಸ್ಟ್ರೈಕ್ಸ್ ಬಗ್ಗೆ ಸಾಕ್ಷ್ಯವನ್ನು ಕೇಳುತ್ತಲೇ ಇದ್ದಾರೆ. ರಾಹುಲ್ ಗಾಂಧಿ ಅವರ ದೇಹಕ್ಕೆ ಬಾಂಬ್ ಕಟ್ಟಿ ಅವರನ್ನು ಬೇರೆ ದೇಶಕ್ಕೆ ಕಳುಹಿಸಬೇಕು. ಬಳಿಕ ಅವರಿಗೆ ಸತ್ಯದ ಅರಿವಾಗಬಹುದು' ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಜಲ್ನಾ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ರಾಜ್ಯ ಬಿಜೆಪಿ ಅಧ್ಯಕ್ಷ ರಾವ್ ಸಾಹೇಬ್ ದಾನ್ವೆ ಅವರ ಪರ ಪಂಕಜಾ ಪ್ರಚಾರ ನಡೆಸುತ್ತಿದ್ದರು.

'ಈ ದೇಶವನ್ನು ಭಯೋತ್ಪಾದನೆ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸಿದ ಸಂದರ್ಭದಲ್ಲಿ ಅವರನ್ನು ಪ್ರಶ್ನಿಸುತ್ತಾರೆ. ನಮ್ಮ ಸೈನಿಕರ ಮೇಲೆ ದಾಳಿ ಮಾಡಿದಾಗ ಸರ್ಜಿಕಲ್ ದಾಳಿಯ ಮೂಲಕ ಪ್ರತಿಕ್ರಿಯೆ ನೀಡಿದವರು ನಾವು. ರಾಹುಲ್ ಗಾಂಧಿ ಅವರು ನಮಗೆ ಸಾಕ್ಷ್ಯ ಒದಗಿಸುವಂತೆ ಹೇಳುತ್ತಾರೆ. ಅವರ ಕುತ್ತಿಗೆ ಸುತ್ತ ಬಾಂಬ್ ಕಟ್ಟಿ ಬೇರೊಂದು ದೇಶಕ್ಕೆ ಎಸೆಯಬೇಕು. ಇಂದಿನ ದಿನಗಳಲ್ಲಿ ಹೆಡ್‌ಲೈನ್‌ನಲ್ಲಿ ಕಾಣಿಸಿಕೊಳ್ಳುವ ಸಲುವಾಗಿ ಸರ್ಜಿಕಲ್ ಸ್ಟ್ರೈಕ್‌ನಲ್ಲಿ ನಮ್ಮನ್ನು ಪ್ರಶ್ನಿಸುವಂತಾಗಿದೆ' ಎಂದು ಪಂಕಜಾ ತಿಳಿಸಿದ್ದಾರೆ.
ಪಂಕಜಾ ಮುಂಡೆ ಅವರ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ. 'ಬಿಜೆಪಿ ನಾಯಕರ ಕೀಳುಮಟ್ಟದ ಚಿಂತನೆ ಮತ್ತೊಮ್ಮೆ ದೃಢಪಟ್ಟಿದೆ. ಇದಕ್ಕಿಂತಲೂ ಕೆಳಮಟ್ಟದ್ದನ್ನು ಅವರಿಂದ ನಿರೀಕ್ಷಿಸುವುದಿಲ್ಲ. ಹುತಾತ್ಮನನ್ನು (ಹೇಮಂತ್ ಕರ್ಕರೆ) ದೇಶ ದ್ರೋಹಿ ಎಂದು ಕಟ್ಟಕಟ್ಟುವವರು ಯಾವ ಹಂತಕ್ಕೆ ಹೋಗಲೂ ಸಿದ್ಧರಿರುತ್ತಾರೆ. ಮುಂಡೆ ಅವರ ಹೇಳಿಕೆಯನ್ನು ನಾವು ಖಂಡಿಸುತ್ತೇವೆ' ಎಂದು ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್ ಹೇಳಿದ್ದಾರೆ.












Click it and Unblock the Notifications