ನಾವು ಮಹಾರಾಷ್ಟ್ರದವರು, ಇ. ಡಿ. ಗೆ ಹೆದರಿ ದೆಹಲಿಗೆ ಬಗ್ಗಲ್ಲ: ಶರದ್ ಪವಾರ್
ಮುಂಬೈ, ಸೆಪ್ಟೆಂಬರ್ 25: "ನಾನು ಮುಂದಿನ ತಿಂಗಳು ಪೂರ್ತಿ ಚುನಾವಣೆ ಪ್ರಚಾರದಲ್ಲಿ ತೊಡಗಿರುತ್ತೇವೆ. ಆದ್ದರಿಂದ ಮುಂಬೈನಲ್ಲಿರುವ ಇ. ಡಿ. ಕಚೇರಿಗೆ ಶುಕ್ರವಾರ ಮಧ್ಯಾಹ್ನ ಎರಡು ಗಂಟೆಗೆ ನಾನಾಗಿಯೇ ಹೋಗುತ್ತೇನೆ. ಅವರಿಗೆ ಯಾವ ಮಾಹಿತಿ ಬೇಕೋ ಅದನ್ನು ನೀಡ್ತೀನಿ. ಮತ್ತು ಅವರು ನೀಡುವ ಆತಿಥ್ಯ ಸ್ವೀಕರಿಸ್ತೀನಿ" ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಮುಂಬೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಶರದ್ ಪವಾರ್, ಅವರ ಸೋದರ ಸಂಬಂಧಿ ಅಜಿತ್ ಪವಾರ್ ಮತ್ತು ಮಹಾರಾಷ್ಟ್ರ ರಾಜ್ಯ ಕೋ ಆಪರೇಟಿವ್ ಬ್ಯಾಂಕ್ ನ (ಎಂಎಸ್ ಸಿಬಿ) 70ಕ್ಕೂ ಹೆಚ್ಚು ಪದಾಧಿಕಾರಿಗಳ ವಿರುದ್ಧ ಇಪ್ಪತ್ತೈದು ಸಾವಿರ ಕೋಟಿಯ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಅಡಿಯಲ್ಲಿ ಇ. ಡಿ. ಪ್ರಕರಣ ದಾಖಲಿಸಿದೆ.
ಮುಂಬೈ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ವಿಭಾಗ ದಾಖಲಿಸಿದ್ದ ಎಫ್ ಐಆರ್ ಆಧಾರದಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ. ಈ ಬಗ್ಗೆ ಬಾಂಬೆ ಹೈ ಕೋರ್ಟ್ ಆಗಸ್ಟ್ ಇಪ್ಪತ್ತೆರಡನೇ ತಾರೀಕು ನಿರ್ದೇಶನ ನೀಡಿತ್ತು.

ಶರದ್ ಪವಾರ್ ಮಾತನಾಡಿ, ಮಹಾರಾಷ್ಟ್ರವು ಛತ್ರಪತಿ ಶಿವಾಜಿಯ ರಾಜ್ಯ. ಒಂದು ವಿಷಯ ಏನೆಂದರೆ, ನಾವು ಮಹಾರಾಷ್ಟ್ರದ ಜನರು ಶಿವಾಜಿ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ದೆಹಲಿ ಮುಂದೆ ಎಂದು ಬಗ್ಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಈಗಿನ ಬೆಳವಣಿಗೆ ರಾಜಕೀಯ ಪ್ರೇರಿತ ಅಂತೇನಾದರೂ ನಿಮಗೆ ಅನಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಪವಾರ್, ಇದರಲ್ಲಿ ರಾಜಕೀಯ ಇದೆಯೋ ಇಲ್ಲವೋ ಎಂದು ಅಭಿಪ್ರಾಯ ಹೇಳಲು ಇಷ್ಟಪಡುವುದಿಲ್ಲ. ಆದರೆ ಈಗಿನ ಸಂದರ್ಭವೇ ಎಲ್ಲವನ್ನೂ ವಿವರಿಸುವಂತಿದೆ. ಇನ್ನೇನು ಮಹಾರಾಷ್ಟ್ರ ಚುನಾವಣೆ ಹತ್ತಿರದಲ್ಲಿದೆ. ಆದ್ದರಿಂದ ಜನರೇ ಎಲ್ಲವನ್ನೂ ಆರ್ಥ ಮಾಡಿಕೊಳ್ಳುತ್ತಾರೆ.












Click it and Unblock the Notifications