ಹನುಮಾನ್ ಚಾಲೀಸಾ ವಿವಾದ; ಎಂಪಿ ನವನೀತ್ ಕೌರ್ ರಾಣಾ ಬಂಧನ
ಮುಂಬೈ, ಏಪ್ರಿಲ್ 24; ಮಹಾರಾಷ್ಟ್ರದಲ್ಲೂ ಹನುಮಾನ್ ಚಾಲೀಸಾ ವಿವಾದ ಮತ್ತಷ್ಟು ಕಾವು ಪಡೆದಿದೆ. ಅಮರಾವತಿ ಸಂಸದೆ ನವನೀತ್ ಕೌರ್ ರಾಣಾ, ಆಕೆಯ ಪತಿ ರಾಣಾ ಕೌರ್‌ರನ್ನು ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.
ಮುಖ್ಯಮಂತ್ರಿ ಉದ್ಭವ್ ಠಾಕ್ರೆ ನಿವಾಸದ ಹೊರಗೆ ಹುನುಮಾನ್ ಚಾಲೀಸಾ ಪಠಿಸುವ ತಮ್ಮ ನಿರ್ಧಾರವನ್ನು ಹಿಂಪಡೆಯಲು ತೀರ್ಮಾನಿಸಿದ್ದೇವೆ ಎಂದು ನವನೀತ್ ಕೌರ್ ದಂಪತಿ ಪ್ರಕಟಿಸಿದ್ದರು. ಈ ಘೋಷಣೆ ಬಳಿಕ ಅವರನ್ನು ಬಂಧಿಸಲಾಗಿದೆ.
ಉದ್ಭವ್ ಠಾಕ್ರೆ ನಿವಾಸದ ಹೊರಗೆ ಹುನುಮಾನ್ ಚಾಲೀಸಾ ಪಠಿಸುತ್ತೇವೆ ಎಂದು ಮೊದಲು ದಂಪತಿಗಳು ಹೇಳಿಕೆ ನೀಡಿದ್ದರು. ಈ ಹೇಳಿಕೆ ಬಳಿಕ ಶುಕ್ರವಾರ ಮುಂಬೈನ ಖಾರ್ ಪ್ರದೇಶದಲ್ಲಿರುವ ಸಂಸದೆ ನವನೀತ್ ಕೌರ್ ನಿವಾಸಕ್ಕೆ ಪೊಲೀಸರು ಭೇಟಿ ನೀಡಿ ನೋಟಿಸ್ ನೀಡಿದ್ದರು.

ಶನಿವಾರ ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಾಂದ್ರಾದ ರಜೆ ಕಾಲದ ನ್ಯಾಯಾಲಯದ ಮುಂದೆ ಭಾನುವಾರ ದಂಪತಿಗಳನ್ನು ಹಾಜರುಪಡಿಸಲಾಗುತ್ತದೆ. ಸದ್ಯ ದಂಪತಿಗಳು ಪಶ್ಚಿಮ ಮುಂಬೈನ ಖಾರ್ ಪೊಲೀಸ್ ಠಾಣೆಯ ಪೊಲೀಸರ ವಶದಲ್ಲಿದ್ದಾರೆ.
ರಾಣಾ ದಂಪತಿಗಳ ವಿರುದ್ಧ ಐಪಿಸಿ ಸೆಕ್ಷನ್ 153 (ಎ), ಮುಂಬೈ ಪೊಲೀಸ್ ಕಾಯ್ದೆಯ ಸೆಕ್ಷನ್ 135ರ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಈ ವಿಚಾರವನ್ನು ಸರ್ಕಾರ ನಿರ್ವಹಣೆ ಮಾಡುತ್ತಿರುವ ರೀತಿ ಬಗ್ಗೆ ಟೀಕಿಸಿದ್ದಾರೆ.
ಶನಿವಾರ ಪತ್ರಿಕಾಗೋಷ್ಠಿ ನಡೆಸಿದ್ದ ನವನೀತ್ ಕೌರ್ ದಂಪತಿ ಉದ್ಭವ್ ಠಾಕ್ರೆ ನಿವಾಸದ ಹೊರಗೆ ಹುನುಮಾನ್ ಚಾಲೀಸಾ ಪಠಿಸುವ ತೀರ್ಮಾನದಿಂದ ಹಿಂದೆ ಸರಿದಿದ್ದೇವೆ ಎಂದು ಹೇಳಿದ್ದರು. ಆದರೂ ಸಹ ಶನಿವಾರ ರಾತ್ರಿ ದಂಪತಿಗಳನ್ನು ಬಂಧಿಸಲಾಗಿದೆ.
ಶಿವಸೇನೆಯ ಕಾರ್ಯಕರ್ತರು ಶನಿವಾರ ನವನೀತ್ ಕೌರ್ ನಿವಾಸದ ಹೊರಗೆ ಬೃಹತ್ ಪ್ರತಿಭಟನೆ ನಡೆಸಿದ್ದರು. ಬ್ಯಾರಿಕೇಡ್ ಮುರಿದು ಒಳನುಗ್ಗಲು ಯತ್ನಿಸಿದ್ದರು. ಆಗ ಪೊಲೀಸರು ಅವರನ್ನು ತಡೆದಿದ್ದರು.
ದೂರು ದಾಖಲು; ನವನೀತ್ ಕೌರ್ ದಂಪತಿಗಳು ತಮ್ಮ ನಿವಾಸದ ಹೊರಗೆ ನಡೆದ ಪ್ರತಿಭಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಮುಖ್ಯಮಂತ್ರಿ ಉದ್ಭವ್ ಠಾಕ್ರೆ, ಶಿವಸೇನೆ ಪಕ್ಷದ ನಾಯಕರಾದ ಅನಿಲ್ ಪರಬ್, ಸಂಜಯ್ ರಾವುತ್ ಸೇರಿದಂತೆ 700 ಜನರ ವಿರುದ್ಧ ದೂರು ನೀಡಿದ್ದು, ಬಂಧಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದ ಪ್ರತಿಪಕ್ಷ ಬಿಜೆಪಿ ರಾಜ್ಯದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಟೀಕಿಸಿದೆ. ವಿಚಾರವನ್ನು ನಿರ್ವಹಣೆ ಮಾಡಲು ವಿಫಲವಾಗಿರುವ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಡಲು ಇದು ಬಿಜೆಪಿ ಪ್ರಯೋಜಿತ ಎಂದು ಆರೋಪಿಸುತ್ತಿದೆ ಎಂದು ದೂರಿದೆ.
ಶುಕ್ರವಾರ ದಂಪತಿಗೆ ನೋಟಿಸ್ ನೀಡಿದ್ದ ಪೊಲೀಸರು ಶಾಂತಿ, ಸುವ್ಯಸ್ಥೆಗೆ ಧಕ್ಕೆ ತರಬಾರದು ಎಂದು ಸೂಚನೆ ನೀಡಿದ್ದರು. ಮುಖ್ಯಮಂತ್ರಿಗಳ ನಿವಾಸ 'ಮಾತೋಶ್ರೀ' ಮುಂದೆ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಮಹಾರಾಷ್ಟ್ರದಲ್ಲಿನ ಮಸೀದಿಗಳಲ್ಲಿ ಅಝಾನ್ ಕೂಗುವ ವಿಚಾರದ ಕುರಿತು ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿಯೇ ನವನೀತ್ ಕೌರ್ ದಂಪತಿ ಮುಖ್ಯಮಂತ್ರಿಗಳ ನಿವಾಸದ ಮುಂದೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಣೆ ಮಾಡಿದ್ದರು. ಇದನ್ನು ಖಂಡಿಸಿ ಶಿವಸೇನೆ ಕಾರ್ಯಕರ್ತರು ನವನೀತ್ ಕೌರ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದರು.
ಶಿವಸೇನೆಯ ಸಂಸದ ಸಂಜಯ್ ರಾವತ್ ಮಾತನಾಡಿ ಹನುಮಾನ್ ಚಾಲೀಸಾ ಹಾಗೂ ರಾಮ ನವಮಿ ಹಬ್ಬ ನಂಬಿಕೆಗಳೇ ವಿನಃ ಶಕ್ತಿ ಪ್ರದರ್ಶನ ಮಾಡುವ ವಿಚಾರಗಳಲ್ಲ ಎಂದು ಹೇಳಿಕೆ ನೀಡಿದ್ದರು.
ಹನುಮಾನ್ ಚಾಲೀಸಾ ಪಠಣ ವಿವಾದ ಮಹಾರಾಷ್ಟ್ರದಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ನವನೀತ್ ಕೌರ್ ದಂಪತಿಗಳ ಬಂಧನದ ಬಳಿಕ ಮುಂದೆ ಯಾವ ತಿರುವು ಪಡೆಯಲಿದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications