'ಸಂಸ್ಕಾರಿ' ನಟ ಅಲೋಕ್ ನಾಥ್ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು, ನವೆಂಬರ್ 21 : ಇಪ್ಪತ್ತು ವರ್ಷಗಳ ಹಿಂದೆ ಸ್ಕ್ರಿಪ್ಟ್ ರೈಟರ್ ಆಗಿದ್ದ ವಿನ್ತಾ ನಂದಾರ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಹಿಂದಿ ಚಿತ್ರನಟ 'ಸಂಸ್ಕಾರಿ' ಅಲೋಕ್ ನಾಥ್ ವಿರುದ್ಧ ಕಡೆಗೂ ಎಫ್ಐಆರ್ ದಾಖಲಾಗಿದೆ.
ಹೆಂಡತಿ ಮನೆಯಲ್ಲಿಲ್ಲದ ಸಮಯದಲ್ಲಿ, ತಾವು ಕುಡಿತದ ಅಮಲಿನಲ್ಲಿದ್ದಾಗ ಅಲೋಕ್ ಕುಮಾರ್ ಅವರು ತಮ್ಮನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದರು ಎಂದು ವಿನ್ತಾ ನಂದಾ ಅವರು ಪೊಲೀಸರಿಗೆ ದೂರು ನೀಡಿದ್ದರು.
ದೂರನ್ನು ಸ್ವೀಕರಿಸಿದ್ದ ಓಶಿವಾರಾ ಪೊಲೀಸರು ವಿಚಾರಣೆ ನಡೆಸಿ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ಮುಂಬೈನ ಹೆಚ್ಚುವರಿ ಪೊಲೀಸ್ ಕಮಿಷನರ್ ಸಿಪಿ ಮನೋಜ್ ಶರ್ಮಾ ಅವರು ಹೇಳಿದ್ದಾರೆ.

ತಮ್ಮ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಕುರಿತು ವಿನ್ತಾ ನಂದಾ ಅವರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಈ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸುತ್ತೇನೆ ಎಂದು ಸವಾಲು ಹಾಕಿದ್ದರು. ವಿನ್ತಾ ಅವರು ಬಹಿರಂಗವಾಗಿ ಈ ಪ್ರಕರಣದ ಬಗ್ಗೆ ಮಾತನಾಡದಂತೆ ಅಲೋಕ್ ಅವರು ಕೇಳಿದ್ದರೂ ಕೋರ್ಟ್ ನಿರಾಕರಿಸಿತ್ತು.
ಮಿಟೂ ಅಭಿಯಾನದ ಭಾಗವಾಗಿ ತಮ್ಮ ಮೇಲೆ ಅತ್ಯಾಚಾರದ ಆರೋಪ ಕೇಳಿಬಂದಿದ್ದಾಗ ಅಲೋಕ್ ನಾಥ್ ಅವರು ಈ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಅವರ ಮೇಲೆ ಅತ್ಯಾಚಾರ ನಡೆದಿರಬಹುದು, ಆದರೆ ಮಾಡಿದ್ದು ನಾನಲ್ಲ ಎಂದು ಹೇಳಿಕೆ ನೀಡಿದ್ದರು.
ತಮ್ಮ ಮಾನ ಮರ್ಯಾದೆ ಸಾರ್ವಜನಿಕವಾಗಿ ಹರಾಜಾಗುತ್ತಿದ್ದಂತೆ ತಿರುಗಿಬಿದ್ದಿದ್ದ 72 ವರ್ಷ ಹರೆಯದ ಹಿರಿಯ ನಟ ಅಲೋಕ್ ನಾಥ್ ಅವರು, ವಿನ್ತಾ ನಂದಾ ವಿರುದ್ಧ 1 ರುಪಾಯಿಗೆ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅಲೋಕ್ ಅವರ ಪರವಾಗಿ ವಿನ್ತಾ ಅವರ ಸ್ನೇಹಿತೆಯಾಗಿರುವ ಅಲೋಕ್ ಅವರ ಪತ್ನಿ ಆಶು ಸಿಂಗ್ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.
ಅಲೋಕ್ ನಾಥ್ ವಿರುದ್ಧ ವಿನ್ತಾ ನಂದಾ ಮಾತ್ರವಲ್ಲ ಇನ್ನೂ ಹಲವಾರು ನಟಿಯರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾರೆ. ನಟಿ ಸಂಧ್ಯಾ ಮೃದುಲ್ ಅವರು ಕೂಡ ಅಲೋಕ್ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಹೊರಿಸಿದ್ದಾರೆ. ಕೊಡೈಕೆನಾಲ್ ನಲ್ಲಿ ಅಪ್ಪನ ಸ್ಥಾನದಲ್ಲಿದ್ದ ಅಲೋಕ್ ಅವರು ತಮ್ಮ ಮೇಲೆ ಅತ್ಯಾಚಾರ ಎಸಗಲು ಬಂದಿದ್ದರು ಎಂದು ಅವರು ದೂರಿದ್ದಾರೆ. ಹಾಗೆಯೆ ಇನ್ನೊಬ್ಬ ಹೆಸರು ಹೇಳಲಿಚ್ಛಿಸದ ನಟಿ ಕೂಡ, ಅಲೋಕ್ ಅವರು ತಮ್ಮೆದುರಲ್ಲೇ ನಗ್ನರಾಗಿದ್ದರು ಎಂದು ಆರೋಪಿಸಿದ್ದಾರೆ.












Click it and Unblock the Notifications