ಬಾಲಿವುಡ್ ನಟ ಸುನಿಲ್ ಶೆಟ್ಟಿ ಮೇಲೆ ಎಫ್ ಐಆರ್
ಉದಯಪುರ, ಮೇ.2: ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರ ಮೇಲೆ ವಂಚನೆ ಕೇಸ್ ಬಿದ್ದಿದೆ. ರಾಜಸ್ಥಾನ ಮೂಲದ ಸಿನಿಮಾ ನಿರ್ಮಾಪಕರೊಬ್ಬರು ಸುನಿಲ್ ಶೆಟ್ಟಿ ವಿರುದ್ಧ ದೂರು ನೀಡಿದ್ದರು. ದೂರು ಪರಿಶೀಲಿಸಿದ ಇಲ್ಲಿನ ಪೊಲೀಸರು ಕೇಸು ದಾಖಲಿಸಿಕೊಂಡು ಶುಕ್ರವಾರ ಎಫ್ ಐಆರ್ ಹಾಕಿದ್ದಾರೆ.
ಸುನಿಲ್ ಶೆಟ್ಟಿ ಅವರು ನನ್ನ ಚಿತ್ರದಲ್ಲಿ ನಟಿಸಲು ಸುಮಾರು 21 ಲಕ್ಷ ರು ಪಡೆದುಕೊಂಡಿದ್ದರು. ಆದರೆ, ಅಡ್ವಾನ್ಸ್ ಪಡೆದುಕೊಂಡ ಮೇಲೆ ನಾಪತ್ತೆಯಾಗಿದ್ದಾರೆ. ನನ್ನ ಹಣವನ್ನು ಹಿಂತಿರುಗಿಸಿಲ್ಲ, ಫೋನ್ ಕರೆ ಸ್ವೀಕರಿಸುತಿಲ್ಲ. ಚಿತ್ರೀಕರಣದ ಬಗ್ಗೆ ಕೇಳಿಲ್ಲ ಎಂದು ನಿರ್ಮಾಪಕ ದೂರಿದ್ದಾರೆ.

ಸುನಿಲ್ ಶೆಟ್ಟಿ ಅವರು ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದರು. ಆದರೆ, ಶೆಟ್ಟಿ ಅವರು ದುಡ್ಡು ವಾಪಸ್ ಮಾಡಲಿಲ್ಲ ಎಂದು ತಿಳಿದು ಬಂದಿದೆ. ಸುನಿಲ್ ಶೆಟ್ಟಿ ಮೇಲೆ ಭಾರತೀಯ ದಂಡ ಸಂಹಿತೆ ಪ್ರಕಾರ ಸೆಕ್ಷನ್ 420(ವಂಚನೆ), 406 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಲಾಗಿದೆ. ಹಣ ಪಾವತಿ ಹಾಗೂ ಇನ್ನಿತರ ವಿವರಗಳನ್ನು ಬ್ಯಾಂಕಿನಿಂದ ಪಡೆಯಲಾಗುತ್ತಿದೆ ಎಂದು ತನಿಖಾಧಿಕಾರಿ ಹೇಳಿದ್ದಾರೆ.
'ಮುಂಬೈ ಕಿಸ್ಕಿ' ಎಂಬ ಹೆಸರಿನಲ್ಲಿ ಚಿತ್ರವೊಂದು ಕಳೆದ ವರ್ಷದ ಜೂನ್ ತಿಂಗಳಿನಲ್ಲಿ ಮುಂಬೈನಲ್ಲಿ ಸೆಟ್ಟೇರಿತ್ತು. ಈ ಚಿತ್ರದ ನಾಯಕ ಪಾತ್ರ ಮಾಡಲು ಸುನಿಲ್ ಶೆಟ್ಟಿ ಒಪ್ಪಿಕೊಂಡು 70 ಲಕ್ಷ ರು ಸಂಭಾವನೆ ಪಡೆಯಲು ಸಮ್ಮತಿಸಿದ್ದರು. ಚಿತ್ರೀಕರಣ ಆರಂಭಕ್ಕೂ ಮುನ್ನ ಮುಂಗಡ ಹಣವಾಗಿ 21 ಲಕ್ಷ ರು ಪಡೆದುಕೊಂಡಿದ್ದರು ಎಂದು ನಿರ್ಮಾಪಕ ಹೇಮೇಂದ್ರ ಸಿಂಗ್ ವಿವರಿಸಿದ್ದಾರೆ. (ಪಿಟಿಐ)












Click it and Unblock the Notifications