ಸುಲಿಗೆ ಪ್ರಕರಣ: ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅಮಾನತು
ಮುಂಬೈ ಡಿಸೆಂಬರ್ 2: ಸುಲಿಗೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರನ್ನು ಮಹಾರಾಷ್ಟ್ರ ಸರ್ಕಾರ ಗುರುವಾರ ಅಮಾನತು ಮಾಡಿದೆ. ಪರಮ್ ಬೀರ್ ಸಿಂಗ್ ಮತ್ತು ಮತ್ತೊಬ್ಬ ಡಿಸಿಪಿ ಶ್ರೇಣಿಯ ಅಧಿಕಾರಿಯ ಅಮಾನತು ಮಾಡಲಾಗಿದ್ದು ಶಿಕ್ಷೆಯನ್ನು ಜಾರಿಗೊಳಿಸಲು ಮಹಾರಾಷ್ಟ್ರದ ಡಿಜಿಪಿಗೆ ಆದೇಶವನ್ನು ಕಳುಹಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಮೂರು ವಾರಗಳ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಹಿಂತಿರುಗಿದ ನಂತರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಸಿಂಗ್ ಅವರ ಅಮಾನತು ನಿರ್ಧಾರ ಕೈಗೊಂಡಿದ್ದಾರೆ.
ಪರಮ್ ಬೀರ್ ಸಿಂಗ್ ಅವರು ಕರ್ತವ್ಯಕ್ಕೆ ಅನಧಿಕೃತ ಗೈರುಹಾಜರಿ ಸೇರಿದಂತೆ ಕೆಲವು ಅಕ್ರಮಗಳು ಮತ್ತು ಲೋಪಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಶಿಸ್ತು ಕ್ರಮಗಳನ್ನು ಪ್ರಾರಂಭಿಸಿದೆ. ಅಲ್ಲದೆ, ರಾಜ್ಯ ಡಿಜಿಪಿ ಅನುಮತಿಯಿಲ್ಲದೆ ಸಿಂಗ್ ಪ್ರಧಾನ ಕಚೇರಿಯಿಂದ ಹೊರಹೋಗಬಾರದು. ಆದರೆ ಪರಮ್ ಬೀರ್ ಸಿಂಗ್ ಕೆಲ ದಿನಗಳಿಂದ ನಾಪತ್ತೆಯಾಗಿದ್ದಾರೆ. ಯಾವುದೇ ಕರೆಗೂ ಸಿಗುತ್ತಿಲ್ಲ. ಕುಟುಂಬಸ್ಥರ ಸಂಪರ್ಕಕ್ಕೂ ಬಂದಿಲ್ಲ. ಹೀಗಾಗಿ ಅವರು ಎಲ್ಲಿದ್ದಾರೆನ್ನುವ ಮಾಹಿತಿ ಯಾರಿಗೂ ಕೂಡ ಇಲ್ಲ.
ಹೌದು... ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರಕ್ಕೆ ಮುಜುಗರ ತಂದ 100 ಕೋಟಿ ರೂ. ಹಫ್ತಾ ವಸೂಲಿ ಪ್ರಕರಣದ ಕೇಂದ್ರ ಬಿಂದುವಾಗಿದ್ದ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ನಾಪತ್ತೆಯಾಗಿದ್ದಾರೆ. 100 ಕೋಟಿ ಹಫ್ತಾ ವಸೂಲಿ ಮಾಡಲು ಇಲಾಖೆಗೆ ಗೃಹ ಸಚಿವ ಅನಿಲ್ ದೇಶ್ ಮುಖ್ ಅವರಿಂದ ಸೂಚನೆ ಬಂದಿತ್ತು ಎಂದು ಗಂಭೀರ ಆರೋಪ ಮಾಡಿದ್ದ ಪರಮ್ ಬೀರ್ ಸಿಂಗ್, ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದರು. ಮಹಾರಾಷ್ಟ್ರ ವಿಕಾಸ್ ಅಘಾಡಿಯಲ್ಲೂ ಈ ಪತ್ರ ಸಂಚಲನ ಮೂಡಿಸಿತ್ತು. ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆ ಬಳಿ ಪತ್ತೆಯಾದ ಸ್ಪೋಟಕ ವಾಹನ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರ ನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ವರ್ಗಾವಣೆಗೊಂಡಿದ್ದ ಪರಮ್ ಬೀರ್ ಸಿಂಗ್ ಅವರನ್ನು ಹುಡುಕಲಾಗುತ್ತಿದೆ.

ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಪರಮ್ ಬೀರ್ ಸಿಂಗ್ ಮತ್ತು ಉಳಿದ ಇಬ್ಬರನ್ನು "ಘೋಷಿತ ಅಪರಾಧಿಗಳು" ಎಂದು ಪ್ರಕಟಿಸಲು ಕೋರಿ ಮುಂಬೈ ಪೊಲೀಸರು ನಗರದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಸಿಂಗ್ ಹಾಗೂ ಇತರ ಇಬ್ಬರು ಆರೋಪಿಗಳಾದ ವಿನಯ್ ಸಿಂಗ್ ಅಲಿಯಾಸ್ ಬಬ್ಲು, ಅಮಾನತುಗೊಂಡ ಪೋಲೀಸ್ ರಿಯಾಜ್ ಭಾಟಿ ವಿರುದ್ಧ ಅರ್ಜಿ ಸಲ್ಲಿಸಲಾಗಿತ್ತು. ಹೋಟೆಲ್ ಉದ್ಯಮಿ ಬಿಮಲ್ ಅಗರ್‌ವಾಲ್ ನೀಡಿದ ದೂರಿನ ಆಧಾರದ ಮೇಲೆ ಈ ಮೂವರು ಹಾಗೂ ವಜಾಗೊಂಡ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ತಮ್ಮಿಂದ 11 ಲಕ್ಷ ಮೌಲ್ಯದ ನಗದು ಮತ್ತು ವಸ್ತುಗಳನ್ನು ಸಿಂಗ್ ಮತ್ತು ವಾಜೆ ಸುಲಿಗೆ ಮಾಡಿದ್ದಾರೆ ಎಂದು ಅಗರ್‌ವಾಲ್ ಆರೋಪಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್ ವಾಜೆ ಅವರನ್ನು ನ. 15ರವರೆಗೆ ಕ್ರೈಂ ಬ್ರಾಂಚ್ ವಶಕ್ಕೆ ಒಪ್ಪಿಸಲಾಗಿದೆ.
ಇತ್ತೀಚೆಗಷ್ಟೇ ಮುಂಬೈ ನ್ಯಾಯಾಲಯ ಈ ಮೂವರ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ವಾರೆಂಟ್ ಜಾರಿಗಾಗಿ ಕ್ರೈಂ ಬ್ರಾಂಚ್ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿತ್ತು. ಅಧಿಕಾರಿಗಳು ಮೂವರೂ ಆರೋಪಿಗಳ ವಿಳಾಸಕ್ಕೆ ಭೇಟಿ ನೀಡಿದ್ದರೂ ಅವರ ಪತ್ತೆಯಾಗಿರಲಿಲ್ಲ. ಆರೋಪಿಗಳು ಮನೆಗಳಿಗೆ ಬಂದಿಲ್ಲ ಅವರು ಎಲ್ಲಿದ್ದಾರೋ ತಿಳಿದು ಬಂದಿಲ್ಲ ಎಂಬ ಪ್ರತಿಕ್ರಿಯೆ ಪೊಲೀಸರಿಗೆ ದೊರೆತಿತ್ತು. ಮಲಬಾರ್ ಹಿಲ್ ಪ್ರದೇಶದಲ್ಲಿರುವ ಸಿಂಗ್ ಅವರ ಮನೆಗೆ ಮುಂಬೈ ಪೊಲೀಸರು ಭೇಟಿ ನೀಡಿದಾಗ ಅಲ್ಲಿನ ಭದ್ರತಾ ಸಿಬ್ಬಂದಿ ಮತ್ತು ಅಡುಗೆಯವರು ಸಿಂಗ್ ಮತ್ತು ಅವರ ಕುಟುಂಬ ಸದಸ್ಯರು ಕಳೆದ ಮೂರು ತಿಂಗಳಿನಿಂದ ಅಲ್ಲಿ ವಾಸಿಸುತ್ತಿಲ್ಲ. ಅವರು ಎಲ್ಲಿದ್ದಾರೋ ತಿಳಿದಿಲ್ಲ. ಅವರೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂಬುದಾಗಿ ತಿಳಿಸಿದ್ದರು.
ಹಲವು ಬಾರಿ ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಲಾಗಿದ್ದರೂ ಮೂವರೂ ಆರೋಪಿಗಳು ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 82ರ ಪ್ರಕಾರ ಮೂವರನ್ನೂ ʼತಲೆಮರೆಸಿಕೊಂಡಿದ್ದಾರೆʼ ಎಂಬುದಾಗಿ ಘೋಷಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ತಲೆಮರೆಸಿಕೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ವಿರುದ್ಧ ಈಗಾಗಲೇ ಮೂರು ಬಾರಿ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿದ್ದ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ ಇದೀಗ ಪೊಲೀಸ್ ಅಧಿಕಾರಿ ಘೋಷಿತ ಅಪರಾಧಿ ಎಂದು ಘೋಷಿಸಿದೆ.












Click it and Unblock the Notifications