ಸ್ಟಾನ್‌ರ 'ಸಾಂಸ್ಥಿಕ ಹತ್ಯೆ': ಜೈಲಿನಲ್ಲಿ ಉಪವಾಸ ಕುಳಿತ ಎಲ್ಗಾರ್ ಪರಿಷತ್ ಪ್ರಕರಣದ ಆರೋಪಿಗಳು
ಮುಂಬೈ, ಜು.08: ಭೀಮಾ ಕೋರೆಗಾಂವ್ ಪ್ರಕರಣ ಹಾಗೂ ಎಲ್ಗಾರ್ ಪರಿಷತ್ ಪ್ರಕರಣದ ಆರೋಪಿಯಾಗಿದ್ದ ಪಾದ್ರಿ, ಮಾನವ ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿ ಸಾವು ಸಾಂಸ್ಥಿಕ ಹತ್ಯೆಯನ್ನು ವಿರೋಧಿಸಿ ಎಲ್ಗಾರ್ ಪರಿಷತ್-ಮಾವೋವಾದಿ ನಂಟು ಪ್ರಕರಣ ಹತ್ತು ಮಂದಿ ಆರೋಪಿಗಳು ನವಮುಂಬೈನ ತಾಲೋಜ ಜೈಲಿನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
ಎಲ್ಗರ್ ಪರಿಷತ್ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ತಾಲೋಜ ಜೈಲಿನ ಮಾಜಿ ಅಧೀಕ್ಷಕರ ವಿರುದ್ಧವೂ ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಸ್ಟಾನ್ ಸ್ವಾಮಿ ಎಲ್ಗಾರ್ ಪರಿಷತ್ ಪ್ರಕರಣದಲ್ಲಿ 2020 ರ ಅಕ್ಟೋಬರ್‌ನಲ್ಲಿ ರಾಂಚಿಯಲ್ಲಿ ಬಂಧನಕ್ಕೆ ಒಳಗಾಗಿದ್ದರು. ತಾಲೋಜ ಕೇಂದ್ರ ಕಾರಗೃಹದಲ್ಲಿದ್ದ ಸ್ಟಾನ್‌ಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಬಾಂಬೆ ಹೈಕೋರ್ಟ್‌ನ ನಿರ್ದೇಶನದ ಮೇರೆಗೆ ಮೇ 30 ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಸ್ಟಾನ್ ಸ್ವಾಮಿ ನಿಧನರಾದರು.

01 ಜನವರಿ 2018 ರಂದು ಭೀಮಾ ಕೋರೆಗಾಂವ್ ಯುದ್ಧದ ಸ್ಮರಣಾರ್ಥ ಸಮಾರಂಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಮೇಲ್ಜಾತಿಯ ಜನರ ಗುಂಪಿನಿಂದ ದಲಿತರ ಮೇಲೆ ಹಲ್ಲೆ ನಡೆದಿತ್ತು. ಮಹಾರಾಷ್ಟ್ರದಾದ್ಯಂತ ದಲಿತರು ಎರಡು ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಿದ ನಂತರ, ಪ್ರತಿಭಟನೆಗಳು ಹಿಂಸಾತ್ಮಕ ರೂಪ ಪಡೆದಿದ್ದವು. ಪುಣೆ ಗ್ರಾಮೀಣ ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದರು. ಆದರೆ ಅದೇ ಸಮಯದಲ್ಲಿ, 30 ಡಿಸೆಂಬರ್ 2017 ರಂದು ನಡೆದ ಎಲ್ಗರ್ ಪರಿಷತ್ ಕಾರ್ಯದ ಬಗ್ಗೆ ಪುಣೆ ನಗರ ಪೊಲೀಸರು ತನಿಖೆ ಆರಂಭಿಸಿದರು.
ಪೊಲೀಸರ ಪ್ರಕಾರ, ಸಮಾರಂಭದ ಸಂಘಟಕರು ಮತ್ತು ಭಾಷಣಕಾರರು ಹಿಂಸಾಚಾರವನ್ನು ಪ್ರಚೋದಿಸುವ ಭಾಷಣಗಳನ್ನು ನೀಡಿದ್ದರು. ಪುಣೆ ನಗರ ಪೊಲೀಸರು ವಿವಿಧ ಕಾರ್ಯಕರ್ತರನ್ನು ಬಂಧಿಸಿ, ಈ ಕಾರ್ಯಕರ್ತರು ನಿಷೇಧಿತ ಸಿಪಿಐ (ಮಾವೋವಾದಿ) ಜೊತೆಗೆ ಸಂಬಂಧ ಹೊಂದಿದ್ದಾರೆಂದು ಹೇಳಿಕೊಂಡಿದ್ದಾರೆ. ರಾಷ್ಟ್ರ ವಿರೋಧಿ ಕೃತ್ಯದಲ್ಲಿ ಈ ಜನರು ಭಾಗಿಯಾಗಿದ್ದರು ಹಾಗೂ ಪ್ರಧಾನಿ ಮೋದಿ ಹತ್ಯೆಯನ್ನೂ ಯೋಜಿಸುತ್ತಿದ್ದರು ಎಂದು ಪೊಲೀಸರು ದೂರಿದ್ದಾರೆ. ನಂತರ 2020 ರ ಆರಂಭದಲ್ಲಿ ಎನ್‌ಐಎ ಈ ಪ್ರಕರಣವನ್ನು ವಹಿಸಿಕೊಂಡಿದೆ. ಬಂಧಿತ ಆರೋಪಿಗಳಲ್ಲಿ ಫ್ರಾ. ಸ್ಟಾನ್ ಸ್ವಾಮಿ ಒಬ್ಬರು.
ಈ ಪ್ರಕರಣದ ಇತರ ಆರೋಪಿಗಳು ಸ್ಟಾನ್ ಸಾವನ್ನು "ಸಾಂಸ್ಥಿಕ ಕೊಲೆ" ಎಂದು ಹೇಳಿದ್ದು, "ನಿರ್ಲಕ್ಷ್ಯದ ಜೈಲುಗಳು, ಅಸಡ್ಡೆ ನ್ಯಾಯಾಲಯಗಳು ಮತ್ತು ದುರುದ್ದೇಶಪೂರಿತ ತನಿಖಾ ಸಂಸ್ಥೆಗಳೇ ಇದ್ದಕ್ಕೆ ಹೊಣೆ," ಎಂದು ಆರೋಪಿಸಿದ್ದಾರೆ.
ಪ್ರತಿಭಟನೆಯ ಸಂಕೇತವಾಗಿ, ಈ ಪ್ರಕರಣದ ಸಹ-ಆರೋಪಿಗಳಾದ, ರೋನಾ ವಿಲ್ಸನ್, ಸುರೇಂದ್ರ ಗ್ಯಾಡ್ಲಿಂಗ್, ಸುಧೀರ್ ಧವಾಲೆ, ಮಹೇಶ್ ರೌತ್, ಅರುಣ್ ಫೆರೀರಾ, ವೆರ್ನಾನ್ ಗೊನ್ಸಾಲ್ವೆಸ್, ಗೌತಮ್ ನವಲಖಾ, ಆನಂದ್ ತೇಲ್ತುಂಬೆ, ರಮೇಶ್ ಗೈಚೋರ್ ಮತ್ತು ಸಾಗರ್ ಗೋರ್ಖೆ ತಾಲೋಜ ಜೈಲಿನಲ್ಲಿ ಬುಧವಾರ ಉಪವಾಸ ಮಾಡಿದರು.
ಈ ಪ್ರತಿಭಟನೆಯ ಬಗ್ಗೆ ಆರೋಪಿಗಳು ತಮ್ಮ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣದ ಎಲ್ಲಾ ಕೈದಿಗಳು ಸ್ಟಾನ್ ಸ್ವಾಮಿ ಸಾವಿಗೆ ಎನ್ಐಎ ಮತ್ತು ತಲೋಜಾ ಜೈಲಿನ ಮಾಜಿ ಅಧೀಕ್ಷಕ ಕೌಸ್ತುಬ್ ಕುರ್ಲೆಕರ್ ಕಾರಣ ಎಂದು ದೂಷಿಸಿದ್ದಾರೆ ಎಂದು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications