ಎಂಟಿಬಿ ನಾಗರಾಜು ಆಗಮನ: ಅತೃಪ್ತ ಶಾಸಕರು ಹೇಳಿದ್ದೇನು?
ಮುಂಬೈ, ಜುಲೈ 14: ನಾವು 13 ಶಾಸಕರು ಇಲ್ಲಿದ್ದು, ಯಾರೊಬ್ಬರೂ ಸಹ ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲವೆಂದು ಮುಂಬೈನಲ್ಲಿ ತಂಗಿರುವ ಅತೃಪ್ತ ಶಾಸಕರ ತಂಡದ ಮುಖಂಡ ಎಸ್.ಟಿ.ಸೋಮಶೇಖರ್ ಹೇಳಿದರು.
ಮುಂಬೈನ ಖಾಸಗಿ ಹೊಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅತೃಪ್ತ ಶಾಸಕರು, ಎಂಟಿಬಿ ನಾಗರಾಜು ಅವರು ನಮ್ಮ ಮನವೊಲಿಸಿ ನಮ್ಮನ್ನು ಕರೆದುಕೊಂಡು ಹೋಗಲಿಕ್ಕೆ ಬಂದಿಲ್ಲ, ಅವರು ನಮ್ಮೊಂದಿಗೆ ಸೇರಿಕೊಳ್ಳಲಿಕ್ಕೆ ಬಂದಿದ್ದಾರೆ ಎಂದರು.
ಇಲ್ಲಿರುವ ಶಾಸಕರಲ್ಲೇ ಗುಂಪುಗಳು ಆಗಿಬಿಟ್ಟಿವೆ ಎಂಬಿತ್ಯಾದಿ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ, ಆದರೆ ಅವೆಲ್ಲವೂ ಸತ್ಯಕ್ಕೆ ದೂರವಾಗಿರುವವಾಗಿದ್ದು, ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಎಂದು ಅತೃಪ್ತ ಶಾಸಕರ ಪರವಾಗಿ ಎಸ್.ಟಿ.ಸೋಮಶೇಖರ್ ಹೇಳಿದರು.

ಚಿಕ್ಕಬಳ್ಳಾಪುರ ಕ್ಷೇತ್ರದ ಸುಧಾಕರ್ ಅವರ ಮೇಲೆ ವಿಧಾನಸೌಧದಲ್ಲೇ ಹಲ್ಲೆ ಆಗಿದೆ. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅವರು ಪ್ರಸ್ತುತ ಸುರಕ್ಷಿತ ಪ್ರದೇಶದಲ್ಲಿ ಇದ್ದು, ಅವರೂ ಸಹ ನಮ್ಮನ್ನು ಸೇರಿಕೊಳ್ಳಲಿದ್ದಾರೆ ಎಂದರು.
ಇಲ್ಲಿರುವ ಎಲ್ಲ ಶಾಸಕರೂ ರಾಜೀನಾಮೆಗೆ ಬದ್ಧವಾಗಿದ್ದು, ಯಾವುದೇ ನಾಯಕರು ಬಂದು ಕರೆದರೂ ಸಹ ನಾವು ರಾಜೀನಾಮೆ ವಾಪಸ್ ಪಡೆಯುವುದಿಲ್ಲ ಎಂದು ಸೋಮಶೇಖರ್ ಹೇಳಿದರು.
ನಾವು ಯಾವ ಸಂಪರ್ಕದಲ್ಲೂ ಇಲ್ಲ, ನಾವೂ ಸಹ ಯಾರನ್ನೂ ಸಂಪರ್ಕ ಮಾಡಿಲ್ಲ, ಅಷ್ಟೆ ಅಲ್ಲದೆ, ನಾವು ಯಾರನ್ನೂ ಭೇಟಿ ಸಹ ಆಗುವುದಿಲ್ಲ, ನಮ್ಮನ್ನು ಭೇಟಿ ಆಗಲು ಬರುವವರನ್ನು ಒಳಗೆ ಬಿಡಬೇಡಿ ಎಂದು ಹೊಟೆಲ್ ಆಡಳಿತ ಮಂಡಳಿಗೆ ತಿಳಿಸಿದ್ದೇವೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.












Click it and Unblock the Notifications