ಕ್ರೂಸ್ ಡ್ರಗ್ಸ್ ಪ್ರಕರಣ: ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ 4 ಉದ್ಯೋಗಿಗಳನ್ನು ಬಂಧಿಸಿದ ಎನ್‌ಸಿಬಿ
ಮುಂಬೈ, ಅಕ್ಟೋಬರ್ 5: ಮುಂಬೈನ ಕ್ರೂಸ್ ಲೈನರ್ ಡ್ರಗ್ ಪಾರ್ಟಿ ಪ್ರಕರಣ ಸಂಬಂಧಿಸಿದಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಅಧಿಕಾರಿಗಳು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯ ನಾಲ್ವರನ್ನು ಎನ್‌ಸಿಬಿ ಸೆರೆ ಹಿಡಿದಿದ್ದು, ಈ ಮೂಲಕ ಡ್ರಗ್ಸ್ ಕೇಸ್‌ನಲ್ಲಿ ಈವರೆಗೆ ಬಾಲಿವುಡ್ ನಟ ಶಾರುಖ್ ಪುತ್ರ ಆರ್ಯನ್ ಖಾನ್ ಸೇರಿ 16 ಆರೋಪಿಗಳನ್ನು ಬಂಧಿಸಲಾಗಿದೆ.
ಇನ್ನು ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ವಶದಲ್ಲಿರುವ 4 ಆರೋಪಿಗಳನ್ನು ಮುಂಬೈನ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಹಾಜರು ಪಡೆಸಲಾಗಿತ್ತು. ಮುಂಬೈ ಕೋರ್ಟ್ ಸೋಮವಾರ ಆರ್ಯನ್ ಖಾನ್ ಸೇರಿದಂತೆ ಎಂಟು ಆರೋಪಿಗಳನ್ನು ಅಕ್ಟೋಬರ್ 7ರವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಿದೆ.

ಈ ವೇಳೆ ಎನ್‌ಸಿಬಿ ಅಧಿಕಾರಿಗಳು ವಿಚಾರಣೆ ಇನ್ನು ಬಾಕಿ ಇರುವುದರಿಂದ ಅಬ್ದುಲ್ ಖಾದಿರ್ ಶೇಖ್, ಶ್ರೇಯಸ್ ನಾಯರ್, ಮನೀಶ್ ದರಿಯಾ, ಅವಿನ್ ಸಾಹು ಅನ್ನುವ ಈ ನಾಲ್ವರನ್ನು ಇನ್ನೊಂದಿಷ್ಟು ದಿನ ತಮ್ಮ ಕಸ್ಟಡಿಗೆ ನೀಡುವಂತೆ ನ್ಯಾಯಾಲಯದ ಬಳಿ ಮನವಿ ಮಾಡಿತ್ತು. ಮನವಿಗೆ ಸ್ಪಂದಿಸಿದ ಕೋರ್ಟ್, ನಾಲ್ವರು ಆರೋಪಿಗಳನ್ನು ಅಕ್ಟೋಬರ್ 11ರವರೆಗೆ ಎನ್ ಸಿಬಿ ಕಸ್ಟಡಿಗೆ ಕಳುಹಿಸಿದೆ.
ಮಂಗಳವಾರ ಬಂಧನಕ್ಕೊಳಗಾದ ಎಲ್ಲ ನಾಲ್ವರು ವ್ಯಕ್ತಿಗಳು ಕಾರ್ಡೆಲಿಯಾ ಕ್ರೂಸ್‌ನ ಸಾಮ್ರಾಜ್ಞಿ ಹಡಗಿನಲ್ಲಿ ರೇವ್ ಪಾರ್ಟಿ ಆಯೋಜಿಸಿದ್ದ ದೆಹಲಿ ಮೂಲದ ಈವೆಂಟ್ ಮ್ಯಾನೇಜ್‌ಮೆಂಟ್ ನಮಸ್ಕ್ರೇಯ ಕಂಪನಿಯ ಉದ್ಯೋಗಿಗಳಾಗಿದ್ದಾರೆ. ಮಂಗಳವಾರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.
ಬಂಧಿತರಲ್ಲಿ ನಮಸ್'ಕ್ರೇ ಕಂಪನಿಯ ಹೆಚ್ಚುವರಿ ನಿರ್ದೇಶಕ - ಸಮೀರ್ ಸೆಹಗಲ್ ಮತ್ತು ಗೋಪಾಲ್ಜಿ ಆನಂದ್ ಸೇರಿದ್ದಾರೆ. ಇತರ ಇಬ್ಬರನ್ನು ಮಾನವ್ ಸಿಂಘಾಲ್ ಮತ್ತು ಭಾಸ್ಕರ್ ಅರೋರಾ ಎಂದು ಗುರುತಿಸಲಾಗಿದೆ. ಇನ್ನು ತಲೆಮರೆಸಿಕೊಂಡಿರುವ ನಮಸ್'ಕ್ರೇ ಇನ್ನೂ ಮೂವರು ಉದ್ಯೋಗಿಗಳಿಗಾಗಿ ಎನ್‌ಸಿಬಿ ಬಲೆ ಬೀಸಿದೆ.
ನಮಸ್'ಕ್ರೇ ದೆಹಲಿ ಮೂಲದ ಸಂಸ್ಥೆಯಾಗಿದ್ದು, ಕೆನ್‌ಪ್ಲಸ್ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ಎಂದು ನೋಂದಾಯಿಸಲಾಗಿದೆ. ಸಂಸ್ಥೆಯು 30 ಅಕ್ಟೋಬರ್ 2020 ರಂದು ಸ್ಥಾಪನೆಯಾಗಿದೆ. ಅಕ್ಟೋಬರ್ 2ರಿಂದ ಅಕ್ಟೋಬರ್ 4ರವರೆಗೆ ನಡೆಯಬೇಕಿದ್ದ ಕಾರ್ಡೆಲಿಯಾ ಕ್ರೂಸ್ ಎಂಪ್ರೆಸ್ ಹಡಗಿನಲ್ಲಿ ಈವೆಂಟ್‌ನ ನಿರ್ವಹಣೆಯನ್ನು ನಮಸ್'ಕ್ರೇ ಕಂಪನಿಗೆ ವಹಿಸಲಾಗಿತ್ತು.
ಅರಬ್ಬೀ ಸಮುದ್ರದಲ್ಲಿ ಮೂರು ದಿನಗಳ ವಿಹಾರದಲ್ಲಿ ಡ್ರಗ್ಸ್ ತಂದು ಸೇವಿಸುವ ಬಗ್ಗೆ ಯಾವುದೇ ಮಾಹಿತಿ ಇತ್ತಾ ಎಂದು ಖಚಿತಪಡಿಸಿಕೊಳ್ಳಲು ಸಂಘಟಕರಿಗೆ ಕೇಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications