ಹ್ಯಾನಿ ಬಾಬು ಅವರನ್ನು ಕ್ಯಾಂಡಿ ಆಸ್ಪತ್ರೆಗೆ ಸ್ಥಳಾಂತರಿಸಲು ಬಾಂಬೆ ಹೈಕೋರ್ಟ್ ಆದೇಶ
ಮುಂಬೈ, ಮೇ 19: ಕೊರೊನಾ ಸೋಂಕು ಹಾಗೂ ಬ್ಲ್ಯಾಕ್ ಫಂಗಸ್ ಸೋಂಕಿನಿಂದ ಬಳಲುತ್ತಿರುವ ದೆಹಲಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಹ್ಯಾನಿ ಬಾಬು ಅವರನ್ನು ನಾಳೆಯೊಳಗಾಗಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಸ್ಥಳಾಂತರಿಸಲು ಬಾಂಬೆ ಹೈಕೋರ್ಟ್ ನಿರ್ದೇಶಿಸಿದೆ.
ಹ್ಯಾನಿ ಬಾಬು ಅವರನ್ನು 28, 2020 ರಂದು ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ಬಂಧಿಸಿತ್ತು.
ಹ್ಯಾನಿ ಬಾಬು ಅವರು ಪ್ರಸ್ತುತ ಕೊರೊನಾ ಸೋಂಕು ಹಾಗೂ ಬ್ಲ್ಯಾಕ್ ಫಂಗಸ್ ಸೋಂಕಿನಿಂದ ಬಳಲುತ್ತಿರುವ ಹಿನ್ನೆಲೆ ಅವರಿಗೆ ಚಿಕಿತ್ಸೆಗಾಗಿ ವೈದ್ಯಕೀಯ ಜಾಮೀನು ಕೋರಿ ವಕೀಲರಾದ ಯುಗ್ ಚೌಧರಿ ಮತ್ತು ಪಯೋಶಿ ರಾಯ್ ಅವರ ಮೂಲಕ ಸಲ್ಲಿಸಲಾಗಿದ್ದ ತುರ್ತು ಮನವಿಯನ್ನು ನ್ಯಾಯಮೂರ್ತಿಗಳಾದ ಎಸ್. ಜೆ. ಕಥವಲ್ಲ ಮತ್ತು ಎಸ್.ಪಿ.ತವಾಡೆ ಅವರನ್ನು ಒಳಗೊಂಡ ದ್ವಿಸದಸ್ಯ ನ್ಯಾಯಪೀಠವು ಬುಧವಾರ ವಿಚಾರಣೆ ನಡೆಸಿದೆ.

ರೋಗಿಯು ತನ್ನ ಆಯ್ಕೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅರ್ಹರು. ಕುಟುಂಬವು ಅವರ ಆಯ್ಕೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ಮಾನಸಿಕ ತೃಪ್ತಿಯನ್ನು ಪಡೆಯಲಿ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಕುಟುಂಬದ ಪ್ರಕಾರ, 2021 ರ ಮೇ 3 ರಂದು ಹ್ಯಾನಿ ಬಾಬು ಅವರಿಗೆ ಎಡಗಣ್ಣಿನಲ್ಲಿ ನೋವು ಮತ್ತು ಊತ ಕಾಣಿಸಿಕೊಂಡಿದೆ. ಬಳಿಕ ಅವರಿಗೆ ದೃಷ್ಟಿಯಲ್ಲಿ ಸಮಸ್ಯೆ ಉಂಟಾಗಿದೆ ಹಾಗೂ ತೀವ್ರವಾದ ನೋವು ಕಾಣಿಸಿಕೊಂಡಿದೆ. ಕುಟುಂಬವು ವಿನಂತಿ ಮಾಡಿದ ಬಳಿಕ ಅಂತಿಮವಾಗಿ ಅವರನ್ನು ಮೇ 12 ರಂದು ತಾಲೋಜ ಜೈಲಿನಿಂದ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಬಳಿಕ ಅವರನ್ನು ಜಿಟಿ ಆಸ್ಪತ್ರೆಗೆ ವರ್ಗಾಯಿಸಲಾಗಿದ್ದು ಅಲ್ಲಿ ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ.
ವಿಚಾರಣೆಯ ಸಮಯದಲ್ಲಿ, ನ್ಯಾಯಾಲಯವು ಬಾಬು ಅವರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ್ದು ಬಾಬು ಅವರು ಜಿಟಿ ಆಸ್ಪತ್ರೆಯಲ್ಲಿ ಪಡೆದ ಚಿಕಿತ್ಸೆಯಿಂದ ತೃಪ್ತರಾಗಿರುವುದಾಗಿ ನ್ಯಾಯಪೀಠಕ್ಕೆ ತಿಳಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಅಗತ್ಯ ಸೌಲಭ್ಯಗಳಿಲ್ಲ ಎಂದು ವಕೀಲರಾದ ಯುಗ್ ಚೌಧರಿ ಹೇಳಿದ ಹಿನ್ನೆಲೆ ಕೊನೆಗೆ ನ್ಯಾಯಾಲಯವು ಹ್ಯಾನಿ ಬಾಬು ಅವರನ್ನು ಕ್ಯಾಂಡಿ ಆಸ್ಪತ್ರೆಗೆ ಸ್ಥಳಾಂತರಿಸಲು ಬಾಂಬೆ ಹೈಕೋರ್ಟ್ ಆದೇಶ ನೀಡಿದೆ. ಇನ್ನು ಈ ಅರ್ಜಿಯ ಹೆಚ್ಚುವರಿ ವಿಚಾರಣೆಯನ್ನು ಕೋರ್ಟ್ ಜೂನ್ 9 ರಂದು ಕೈಗೆತ್ತಿಕೊಳ್ಳಲಿದೆ.












Click it and Unblock the Notifications