ವಂಚನೆ ಕೇಸ್: ಸೆನ್ಸಾರ್ ಬೋರ್ಡ್ ರಾಕೇಶ್ ಗೆ ಜಾಮೀನು
ಮುಂಬೈ, ಅ.12: ಪ್ರಾದೇಶಿಕ ಚಿತ್ರವೊಂದಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಲು ಲಂಚ ಪಡೆದುಕೊಂಡ ಆರೋಪ ಎದುರಿಸುತ್ತಿರುವ ಸೆನ್ಸಾರ್ ಮಂಡಳಿಯಿಂದ ಅಮಾನತಾಗಿರುವ ಸಿಇಒ ರಾಕೇಶ್ ಕುಮಾರ್ ಅವರಿಗೆ ಜಾಮೀನು ಮಂಜೂರಾಗಿದೆ. ರಾಕೇಶ್ ಕುಮಾರ್ ಅವರಿಗೆ ಬಾಂಬೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಚಲನಚಿತ್ರಗಳ ಬಿಡುಗಡೆಯ ಪರವಾನಿಗೆಗಾಗಿ ಸುಮಾರು ಲಂಚ ಪಡೆದುಕೊಂಡ ಆರೋಪದಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಬಂಧನಕ್ಕೊಳಗಾಗಿದ್ದ ಸೆನ್ಸಾರ್ ಬೋರ್ಡ್‌ನ ಅಮಾನತುಗೊಂಡಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಕೇಶ್ ಕುಮಾರ್‌ರಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
2 ಲಕ್ಷ ರೂ.ಗಳ ಭದ್ರತಾ ಠೇವಣಿ ಹಾಗೂ ಇಬ್ಬರ ವೈಯಕ್ತಿಕ ಶ್ಯೂರಿಟಿ ಸಲ್ಲಿಸಬೇಕು, ತನಿಖೆ ಮುಗಿಯುವವರೆಗೆ ಮುಂಬೈ ಹಾಗೂ ಚೆನ್ನೈಯಲ್ಲಿರುವ ಸೆನ್ಸಾರ್ ಮಂಡಳಿಯ ಯಾವುದೇ ಕಚೇರಿಗೂ ಭೇಟಿ ನೀಡುವಂತಿಲ್ಲ ಮುಂತಾದ ಷರತ್ತುಗಳನ್ನು ರಾಕೇಶ್ ಕುಮಾರ್ ಅವರಿಗೆ ನ್ಯಾ.ಸಾಧನಾ ಜಾಧವ್ ಕುಮಾರ್ ಅವರು ಸೂಚಿಸಿದ್ದಾರೆ.

ಅ.29ರಿಂದ ಪ್ರತಿ ಬುಧವಾರ, ಶುಕ್ರವಾರ ಮುಂಬೈಯ ತನಿಖಾಧಿಕಾರಿಗೆ ಹೇಳಿಕೆಯನ್ನು ನೀಡಬೇಕು ಹಾಗೂ ತನಿಖಾ ತಂಡದೊಡನೆ ಸಹಕರಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
ಆರೋಪಿ ರಾಕೇಶ್ ಕುಮಾರ್ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ ಹೀಗಾಗಿ ಜಾಮೀನು ನೀಡಬಾರದು ಎಂದು ಸಿಬಿಐ ತಂಡ ಕೋರ್ಟಿನಲ್ಲಿ ವಾದಿಸಿತ್ತು. ಅದರೆ, ಕೋರ್ಟ್ ವಿಧಿಸಿದ್ದ 60 ದಿನಗಳ ಚಾರ್ಜ್‌ಶೀಟ್ ಸಲ್ಲಿಸಲು ಅಸಾಧ್ಯ ಸಿಬಿಐ ಕೋರ್ಟಿಗೆ ಹೇಳಿಕೆ ನೀಡಿತ್ತು. ನಿಗದಿತ ಸಮಯದೊಳಗೆ ಚಾರ್ಜ್‌ಶೀಟ್ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂಬ ಅಂಶವನ್ನು ಪರಿಗಣಿಸಿದ ಕೋರ್ಟ್ ಹೆಚ್ಚಿನ ತನಿಖೆ ನಡೆಸುವಂತೆ ತನಿಖಾ ಏಜೆನ್ಸಿಗೆ ಸೂಚಿಸಿ ರಾಕೇಶ್ ಗೆ ಜಾಮೀನು ಮಂಜೂರು ಮಾಡಿದೆ.
ಪ್ರಾದೇಶಿಕ ಚಿತ್ರವೊಂದಕ್ಕೆ ಸೆನ್ಸಾರ್ ಪ್ರಮಾಣ ಪತ್ರ ನೀಡಲು 70 ಸಾವಿರ ರೂ. ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸೆನ್ಸಾರ್ ಮಂಡಳಿಯ ಸಿಇಒ ರಾಕೇಶ್ ಕುಮಾರ್ ಅವರನ್ನು ಕಳೆದ ಆಗಸ್ಟ್ ತಿಂಗಳಿನಲ್ಲಿ ಸಿಬಿಐ ತಂಡ ಬಂಧಿಸಿತ್ತು.











Click it and Unblock the Notifications