"ಎಂವಿಎ ಸರ್ಕಾರ ಉಳಿಸಲು ಪವಾರ್ ಈ ರೀತಿ ಹೇಳಿಕೆ ನೀಡಿದ್ದಾರೆ"
ಮುಂಬೈ, ಮಾರ್ಚ್ 17: ಶಿವಸೇನಾ ನೇತೃತ್ವದ ಮಹಾರಾಷ್ಟ್ರ ಸರ್ಕಾರವನ್ನು ಉಳಿಸುವ ಸಲುವಾಗಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ದೆಹಲಿಯಲ್ಲಿ ರಾಜ್ಯ ಗೃಹ ಇಲಾಖೆಯನ್ನು ಕೊಂಡಾಡಿದ್ದಾರೆ ಎಂದು ಬಿಜೆಪಿ ಮುಖಂಡ ಸಂಜಯ್ ಕುಟೆ ಟೀಕಿಸಿದ್ದಾರೆ.
"ಶರದ್ ಪವಾರ್ ಮಹಾ ವಿಕಾಸ್ ಅಘಾದಿ ಪಕ್ಷ ಉಳಿಸಬೇಕೆಂದಿದ್ದಾರೆ. ಹೀಗಾಗಿ ಇಂಥ ಹೇಳಿಕೆ ನೀಡಿದ್ದಾರೆ. ಹೀಗಾಗಿ ರಾಜ್ಯ ಗೃಹ ಇಲಾಖೆಯನ್ನು ಸಮರ್ಥಿಸಿಕೊಂಡಿದ್ದಾರೆ" ಎಂದು ಹೇಳಿದ್ದಾರೆ.
ಎನ್‌ಐಎನಿಂದ ಬಂಧನಕ್ಕೊಳಗಾದ ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸುತ್ತಲಿನ ವಿವಾದದ ಕುರಿತು ಮಂಗಳವಾರ ಪ್ರಸ್ತಾಪಿಸಿದ್ದ ಪವಾರ್, "ಈ ಬಂಧನದಿಂದ ಎಂವಿಎ ಸರ್ಕಾರದ ಚಿತ್ರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ" ಎಂದಿದ್ದರು.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಯ ಎಂವಿಎ ಸರ್ಕಾರ ಆಡಳಿತದಲ್ಲಿದೆ.
ಮುಖ್ಯಮಂತ್ರಿಗಳ ಕಾರ್ಯವೈಖರಿ ಕುರಿತು ಕುಟೆ ಟೀಕಿಸಿದ್ದು, "ರೈತರ ಸಂಕಟಗಳು, ಬೆಳೆ ನಷ್ಟ, ವಿದ್ಯುತ್ ಬಿಲ್ ಏರಿಕೆಯಂಥ ಗಂಭೀರ ಸಮಸ್ಯೆಗಳು ರಾಜ್ಯದಲ್ಲಿವೆ. ಆದರೆ ಠಾಕ್ರೆಗೆ ಅದನ್ನು ನಿವಾರಿಸಲು ಸಮಯವಿಲ್ಲ" ಎಂದು ಆರೋಪಿಸಿದ್ದಾರೆ.
ಕೇಂದ್ರದಿಂದ ಹೆಚ್ಚಿನ ಕೊರೊನಾ ಲಸಿಕೆಗಳನ್ನು ಪೂರೈಸಬೇಕೆಂದು ರಾಜ್ಯ ಸರ್ಕಾರ ಬೇಡಿಕೆ ಇಟ್ಟಿದ್ದರ ಕುರಿತು ಪ್ರತಿಕ್ರಿಯಿಸಿರುವ ಕುಟೆ, "ಜ.16ರಿಂದ ರಾಜ್ಯದಲ್ಲಿ ಲಸಿಕೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೂ ಶೇ 45ರಷ್ಟು ಲಸಿಕೆಗಳನ್ನು ಮಾತ್ರ ಬಳಸಲಾಗಿದೆ. ಸದ್ಯದ ವಿವಾದಗಳಿಂದ ವಿಷಯವನ್ನು ಬೇರೆಡೆಗೆ ಸೆಳೆಯಲು ರಾಜ್ಯ ಸರ್ಕಾರ ವಿಷಯಾಂತರ ಮಾಡುತ್ತಿದೆ" ಎಂದು ಹೇಳಿದ್ದಾರೆ.












Click it and Unblock the Notifications