ಮುಂಬೈ; ಕಾರ್ಮಿಕರ ಪ್ರತಿಭಟನೆಗೆ ಪ್ರಚೋದನೆ ನೀಡಿದವ ವಶಕ್ಕೆ
ಮುಂಬೈ, ಏಪ್ರಿಲ್ 15 : ಮುಂಬೈನಲ್ಲಿ ಸಾವಿರಕ್ಕೂ ಅಧಿಕ ವಲಸೆ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಲಾಕ್ ಡೌನ್ ವಿಸ್ತರಣೆ ವಿರೋಧಿಸಿ ಪ್ರತಿಭಟನೆ ನಡೆಸಲು ಪ್ರಚೋದನೆ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಿನಯ್ ದುಬೆ ಎಂಬ ವ್ಯಕ್ತಿಯನ್ನು ಮಂಗಳವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ. ನವಿ ಮುಂಬೈ ಮೂಲದ ವಿನಯ್ ಹಾಕಿದ ಫೇಸ್ ಬುಕ್ ಸ್ಟೇಟಸ್ ಮತ್ತು ಮಾಡಿದ ಟ್ವೀಟ್ ಕಾರ್ಮಿಕರು ಪ್ರತಿಭಟನೆ ನಡೆಸುವಂತೆ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ.
ಫೇಸ್ ಬುಕ್‌ನಲ್ಲಿ ಹಾಕಿದ್ದ ವಿಡಿಯೋದಲ್ಲಿ ವಿನಯ್ ಮಹಾರಾಷ್ಟ್ರ ಸರ್ಕಾರ ವಲಸೆ ಕಾರ್ಮಿಕರಿಗೆ ಊರಿಗೆ ಹೋಗಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದ. ಏಪ್ರಿಲ್ 18ರೊಳಗೆ ರೈಲುಗಳ ವ್ಯವಸ್ಥೆ ಮಾಡದಿದ್ದರೆ ವಲಸೆ ಕಾರ್ಮಿಕರು ದೇಶವ್ಯಾಪಿ ಪ್ರತಿಭಟನೆ ಆರಂಭಿಸಬೇಕು ಎಂದು ಟ್ವೀಟ್ ಮಾಡಿದ್ದ.

ಮಂಗಳವಾರ ಸಂಜೆ ಬಾಂದ್ರಾ ರೈಲು ನಿಲ್ದಾಣಕ್ಕೆ 1000ಕ್ಕೂ ಅಧಿಕ ವಲಸೆ ಕಾರ್ಮಿಕರು ಆಗಮಿಸಿದ್ದರು. ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ್ದರು. ಊರಿಗೆ ಹೋಗಲು ತಮಗೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದರು.
ಈ ಎಲ್ಲಾ ಕಾರ್ಮಿಕರು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳಕ್ಕೆ ಸೇರಿದವರು ಎಂದು ಪೊಲೀಸರು ಹೇಳಿದ್ದಾರೆ. ಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಹೊರಬರಲು ವಿನಯ್ ದುಬೆ ಹಾಕಿದ ಪೋಸ್ಟ್‌ಗಳೇ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ವಲಸೆ ಕಾರ್ಮಿಕರಿಗೆ ಆಹಾರ, ವಸತಿ ವ್ಯವಸ್ಥೆ ಮಾಡುವುದಾಗಿ ಪೊಲೀಸರು ಭರವಸೆ ನೀಡಿದ ಬಳಿಕ ಎಲ್ಲರೂ ವಾಪಸ್ ಆಗಿದ್ದರು. ಈ ಘಟನೆ ದೇಶದ ಗಮನ ಸೆಳೆದಿತ್ತು, ಬೇರೆ ನಗರದಲ್ಲಿ ಈ ರೀತಿಯ ಪ್ರತಿಭಟನೆ ನಡೆಸದಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಭವ ರಾಕ್ರೆಗೆ ಕರೆ ಮಾಡಿದ್ದರು. "ಇಂತಹ ಪ್ರಕರಣದಿಂದ ಕೊರೊನಾ ವಿರುದ್ಧದ ದೇಶದ ಹೋರಾಟಕ್ಕೆ ಹಿನ್ನಡೆಯಾಗಲಿದೆ. ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಇದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ" ಎಂದು ಭರವಸೆ ನೀಡಿದ್ದರು.












Click it and Unblock the Notifications